Wednesday, March 28, 2007

ಹೂವಿನ ಘಮ್ಮತ್ತು.....

"ಹೂವಿಲ್ಲದೆ ಬದುಕಿಲ್ಲ. ಹೂ ಅರಳದ ದಿನವಿಲ್ಲ. ಇಡೀ ಭೂಮಂಡಲವನ್ನೇ ಬೇಸೆಗೆ ಆಳುತ್ತಿರುವ ಸಂದರ್ಭದಲ್ಲೂ,ನಾಡನ್ನು ಬರಗಾಲ ಕಾಡುವ ಕ್ಷಣದಲ್ಲೂ ಅದು ಹೇಗೋ ಹೂವು ಅರಳುತ್ತದೆ! ದೇವರ ಸನ್ನಧಿ ಸೇರಿ ಧನ್ಯವಾಗುತ್ತದೆ.ಹೂವಿಲ್ಲದೆ ಯಾವುದಾದರು ಹಬ್ಬ ನಡೆದಿದೆಯೇ ಹೇಳಿ? ಹುಟ್ಟಿದ ಕ್ಷಣ, ಮದುವೆಯಾದ ಸಂದರ್ಭ, ಪ್ರಸ್ತದ ಅಮಲಿನ ವೇಳೆಯಲ್ಲಿ ಮಾತ್ರವಲ್ಲ,ಮನುಷ್ಯನ ಕೊನೆಯುಸಿರು ಎಳೆದ ಘಳಿಗೆಯಲ್ಲೂ ಹೂವು ಜತಗೇ ಇರುತ್ತದೆ".
( ಸುನಂದಾವರ ಬೆಟ್ಟಸಾಲು ಪುಸ್ತಕದಿಂದ)

ನಾವೆಲ್ಲರೂ ಒಂದೇ. ನಮ್ಮದು ಕೂಡು ಕುಟಂಬ.ಯಾವುದೇ ಜಂಜಾಟವಿಲ್ಲ...ಜಗಳವಿಲ್ಲ.. ಮನುಷ್ಯರಂತೆ ಅತ್ಯಾಸೆ ಹೊಂದಿದವರಲ್ಲ.ಅದ್ರೂ ಮನುಷ್ಯರೂ ನಮ್ಮಲ್ಲೇ ಭೇದ-ಬಾವ ಮಾಡಿ ಅವಳು ಮೊದ್ಲು ,ಇವಳು ದ್ವಿತಿಯ ಅಂತಾ ಬಹುಮಾನ ಕೊಡುತ್ತಾರೆ. ನಾವೆಲ್ಲ ಒಂದೊಂದು ಥರಾ ಚೆನ್ನಾಗಿದ್ದೇವೆ.ನಾವೇಲ್ಲಾ ಒಟ್ಟಾಗಿ ಸೇರೊದು ಅಗಸ್ಟ್ ೧೫ ,ಜನವರಿ ೨೬ ರಂದು. ಅ ದಿನ ನಮ್ಮನೆಲ್ಲಾ ಬೇರೆ ಬೇರೆ ಪ್ರದೇಶಗಳಿಂದ ತಂದು ಲಾಲಭಾಗನಲ್ಲಿ ಪ್ರದರ್ಶನಕ್ಕೆ ಇಡುತ್ತಾರೆ. ಆ ದಿನ ನಾವೆಲ್ಲ ಜೊತೆಯಾಗಿದ್ದು ನಮ್ಮ ಕಸ್ಟ-ಸುಖಗಳನ್ನು ಹಂಚಿಕೊಳ್ಳುತ್ತೆವೆ. ಮೊದ್ಲಿನ ದಿನಗಳಲ್ಲಿ ಆ ಎರಡು ಸಂಧರ್ಭಗಳಲ್ಲಿ ಇಲ್ಲಿ ಭಯಂಕರ ರಶ್ಶು..ಇತ್ತಿಚಿನ ದಿನಗಳಲ್ಲಿ ಮೊದ್ಲಿನ ರಶ್ಶು,ಈಗ ಕಾಣೆಯಾಗಿದೆ.
ನಾವೆಂದರೆ ನಾಡಿಮಿಡಿತ,ನಾವೆಂದರ್‍ಎ ಎಂಥದೋ ಒಂದು ತುಡಿತ,ನಾವೆಂದರೆ ಈ ಜೀವ ಪ್ರತೀಕ. ನಾವ್ವೆಂದರೆ ಒಂದು ರೂಪಕ ಅಂತ ಹಲವಾರು ಕವಿಗಳು ಹಾಡಿ ಹೊಗಳಿದ್ದಾರೆ. ಅಚ್ಚ ಬಿಳಿಯದಕ್ಕೆಲ್ಲಾ ನಮ್ಮ ಮಲ್ಲಿಗೆಯದೇ ಉಪಮೆ.ಇನ್ನು ಸುಂದರವಾದ ಹುಡಗಿಯನ್ನು ವರ್ಣಿಸುವಾಗ ನಮ್ಮ ಪರಿವಾರದೇ ಸಿಂಹಪಾಲು.'ಹೂವ್ವೇ ಹೂವ್ವೇ','ಹೂವು ಚಲುವೆಲ್ಲಾ ನಂದೆದಿತು' ಅನ್ನುವ ಚಿತ್ರಗೀತೆಗಳಿಂದ ಹಿಡಿದು ಬೇಂದ್ರೆ ಮಾಸ್ತರ 'ಘಮ್ಮ ಘಮ್ಮಡಾಸತಾವ ಮಲ್ಲಿಗೆ, ನೀನು ಹೊರಟಿ ಈಗ ಎಲ್ಲಿಗೆ?' ಅನ್ನೊ ಕವಿತೆಗಳಲ್ಲಿ ಎಲ್ಲಾ ಕಡೆ ನಾವ್ವೇ ಸರ್ವಂತ್ರಾಯಾಮಿ. ಇನ್ನು ಪ್ರೇಮ ಕವಿ ಕೆ.ಎಸ್.ಎನ್ ಅವರ ಕೃತಿಯ ಮಲ್ಲಿಗೆ ಪರಿಮಳದ ಹಾಗೆ ಎಲ್ಲಾ ಕಡೆ ಹರಡಿದೆ. ನಾವೇಂದರೆ ಹೆಣ್ಣ ಬದುಕಿನ ಅವಿಬಾಜ್ಯ ಅಂಗ...

ಮುಗಿಸುವ ಮುನ್ನ:
"ಬಿಸೋ ಗಾಳಿ ಬದಲಾಗಿಲ್ಲ,ಹರಿಯೋ ನೀರು ಬದಲಾಗಿಲ್ಲ,ಹೂವು ಬದಲಾಗಲ್ಲ,ಈ ಮನುಷ್ಯ ಮಾತ್ರ ಈ ಪಾಟಿ ಬದಲಾಗಿದ್ದಾನೆ" ಅನ್ನೊ ಬಳೆಗಾರ ಚೆನ್ನಯ್ಯನ ಮಾತಿನಿಂದ ಶುರುವಾಗೋ 'ಮೈಸೂರು ಮಲ್ಲಿಗೆ' ಗೀತನಾಟಕ ನೋಡೊ ಅವಕಾಶ ಮೊನ್ನೆ ಶನಿವಾರದಂದು ಸಿಕ್ಕಿತ್ತು. ಸುಮಾರು ೨೦ ಜನ ರಂಗ ಕಲಾವಿದರು , ೨ ಗಾಯಕ/ಗಾಯಕಿಯರು ೯೦ ನಿಮಿಷಗಳಲ್ಲಿ ಅದ್ಬುತ ಮಾಯಾಲೋಕ ಸೃಷ್ಟಿಸಿಕೊಡುತ್ತಾರೆ. ಕಲಾಗಂಗೋತ್ರಿಯಿಂದ ಪ್ರದರ್ಶಿತವಾಗುತ್ತಿರುವ ಈ ಗೀತನಾಟಕ, ಡಾ. ಬಿ.ವಿ. ರಾಜರಾಂವರ ನಿರ್ದೇಶನ.ರಾಜೇಂದ್ರ ಕಾರಂತ ಕಲ್ಪನಾ ಶಕ್ತಿಯಲ್ಲಿ ಅರಳಿರುವ ಈ ಗೀತನಾಟಕ ಒಂದು ಅನ್ಯನ್ಯ ಪ್ರಯೋಗ.
ನಾಟಕ ಪೂರ್ತಿ ಸೂತ್ರದಾರ ಬಳೆಗಾರ್‍ಅ ಚೆನ್ನಯ್ಯ...ನಿಜ ಆತನಿಗೆ ವಯಸ್ಸಾಗಿದೆ. ಬೆನ್ನು ಬಾಗಿದೆ. ಶಾನುಭೋಗರ ಮಗಳು ಸೀತಮ್ಮಳ ಮರಿಮೊಗಳನ್ನು ಬೇಟಿ ಮಾಡುವ ಈತನಿಗೆ ಅಧುನಿಕತೆಯ ಅರಿವಾದ ನಂತರ ನಿಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುತ್ತಾನೆ. ಪ್ರೇಮ ಕವಿ ಕೆ.ಎಸ್.ನರಸಿಂಹ ಅವರ ಮೈಸೂರು ಮಲ್ಲಿಗೆಯ ಕವನ ಸಂಕಲನದ ಕವನಗಳನ್ನು ಕವಿಯೊಬ್ಬರ ಜೀವನಕ್ರಮಕ್ಕೆ ಅಳವಡಸಿ,ಪಾತ್ರಗಳನ್ನು ಕವನದಲ್ಲೇ ನಿರೂಪಿಸುವುದು ಈ ಪ್ರಯೋಗದ ವೈಶಿಷ್ಟ... "ಮನೆಯಲ್ಲೊಂದು ಮಲ್ಲಿಗೆ ಹೂ ಗಿಡ ನೆಟ್ಟು ಕನ್ನಡದ ಕಂಪನ್ನು ಹರಿಸಿರಿ..." ಎಂದು ಕಡೆಯಲ್ಲಿ ಸಂದೇಶ ಮೆಚ್ಚುಗೆ ಗಳಿಸುತ್ತದೆ...
ಈ ವಾರದ ಶನಿವಾರದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ ಪುನ್: ಪ್ರದರ್ಶಿತವಾಗುತ್ತಿರುವ ಮೈಸೂರು ಮಲ್ಲಿಗೆಯನ್ನು ತಪ್ಪದೇ ವಿಕ್ಷಿಸಿ.ಕೊನೆ ಕ್ಷಣದಲ್ಲಿ ಟಿಕೇಟ್ಟು ಖಂಡಿತಾ ಸಿಗೋದಿಲ್ಲಾ. ಮೊದ್ಲೇ ಬುಕ್ ಮಾಡಿ ಹೋಗಿ..
ಯಶವಂತ ಸರದೇಶಪಾಂಡೆಯ 'ಸಹಿ ರೀ ಸಹಿ' ಮತ್ತು 'ಆಲ್ ದಿ ಬೆಸ್ಟ್' ಎಂಬ ಸುಂದರ ನಗೆ ನಾಟಕಗಳು ವಾರಂತ್ಯದಲ್ಲಿ ಎಚ್.ಎನ್.ಕಲಾಕ್ಷೇತ್ರ ,ಜಯನಗರದಲ್ಲಿ ಪ್ರದರ್ಶಿತವಾಗುತ್ತಿವೆ...


(ಚಿತ್ರಗಳು: ಲಾಲಭಾಗ ಫಲ-ಪುಷ್ಪ ಪ್ರದರ್ಶನ ೨೦೦೭)

Saturday, March 17, 2007

ಜನರೇಷನ್ ಗ್ಯಾಪ್............ಪ್ರಸಂಗ ೧:
ನನ್ನ ಮತ್ತು ಅಜ್ಜನ ನಡುವೆ,
ಅಜ್ಜ : ಯಾವ ಇಸ್ವಿ ನೀನು ಹುಟ್ಟಿದ್ದು?
ನಾನು : ೧೯೮೦ ಅಜ್ಜಾ.
ಅಜ್ಜ : ಹಂಗದರ ಎಸ್ಟು ವಯಸ್ಸು ಅದು?
ನಾನು : ೨೬ ನಡ್ಯಾತ್ತವ.
ಅಜ್ಜ :ಮದ್ವಿ ಬಗ್ಗೆ ಎನು ಯೊಚ್ನೆ ಮಾಡಿ?
ನಾನು : ನನಗೇನು ವಯಸ್ಸಾಗ್ಯವು?
ಅಜ್ಜ : ಮಗನಾ, ನಿನ್ನ ವಯಸ್ಸಿನ್ಯಾಗ ಎರಡು ಮಕ್ಳು ಇದ್ದು ನಂಗ!!!!
ನಾನು " ನಿಮ್ಮ ಕಾಲನೇ ಬೇರೆ, ನಮ್ಮ ಕಾಲನೇ ಬೇರೆ"...

ಪ್ರಸಂಗ ೨:
ನಮ್ಮ ಅಮ್ಮ ಮತ್ತು ತಮ್ಮನ ನಡುವೆ...
ಅಮ್ಮ : ಇಸ್ತ್ರಿ ಪೆಟ್ಟಿಗೆ ಮತ್ತ ಸಿ. ಡಿ. ಪ್ಲೇಯರ ರಿಪೇರಿ ಮಾಡಿಸಿಕೊಂಡು ಬಾರೋ
ತಮ್ಮ : ಹಳೇದೆ ಎನು ಮಾಡತೀ ಬೇ, ಹೊಸಾದ ತಗೊಂಡು ಬರ್‍ಓಣ,
ಅಮ್ಮ : ಯಾಕಪಾ ನಿಂಗ ರೊಕ್ಕ ಹೆಚ್ಚಾಗವೇನು????


ಪ್ರಸಂಗ ೩:
ತಮ್ಮ : ಅಣ್ಣಾ ಲೇ ,ನಿಂಗ ಸ್ಯಾಲರಿ ಏಷ್ಟು ಲೇ?
ನಾನು : ***** ಇಸ್ಟು ಇದೇ ನೋಡಲೇ...
ತಮ್ಮ : ಏನಲೇ? ಎಷ್ಟು ಕಡಿಮಿ ರೊಕ್ಕಕ್ಕೆ ಕೆಲ್ಸಾ ಮಾಡತಿ ಅಲ್ಲಾ ಲೇ ,ನಿಮ್ಮ ಜುನಿಯರ್ಸ್ ನೋಡು ನಿನಗೀಂತ ಜಾಸ್ತಿ ಗಳಸತಾರ.
ನಾನು : ?????????

ಪ್ರಸಂಗ ೪
ನಮ್ಮ :ಮಾವನ ಮಗಳು ಮತ್ತು ನನ್ನ ನಡುವೆ,
ಸೊಸೆ: ಮಾಮ ,ಪ್ರೊಜೆಕ್ಟ ಮಾಡೋದು ಹೇಳಿಕೊಡು....
ನಾನು: ಪ್ರೊಜೆಕ್ಟ ???
ಸೊಸೆ: ಹೂಂ......
ನಾನು : ನನಗ 1st ಬಿ.ಇ ವರಗೆ ಪ್ರೊಜೆಕ್ಟ ಅನ್ನೊದೇ ಗೊತ್ತ ಇರಲಿಲ್ಲ.....
ಸೊಸೆ: ನಿನ್ನ ಕಾಲನೇ ಬೇರೆ ನನ್ನ ಕಾಲನೇ ಬೇರೆ.....

ಮೇಲಿನ ಪ್ರಸಂಗಗಳು ಪೀಳಿಗೆಗಳ ನಡುವೆ ಹೆಚ್ಚುತ್ತಿರುವ ಜೆನರೇಷನ ಗ್ಯಾಪಗೆ ಅತ್ಯ್ತುತಮ ಉದಾಹರಣೆಗಳು.....

ಮುಗಿಸುವ ಮುನ್ನ:
ಭೂಮಿ ಹಸಿರುಟ್ಟ ನಿಂತಾಳ ನೋಡ
ಪೈರು ತಲೆದೂಗಿ ಹಾಡ್ಯಾವ ನೋಡ
ಕುಯ್ಯೋ ಕುಡುಗೋಲು ಕುಣಿದಾವೆ ನೋಡ
ಮೇಲೆ ಹಾರ್ಯವೆ ಬೆಳವಕ್ಕಿ ಜೋಡ......
(ಹಕ್ಕಿ ಹಾಡೇ.... ಪುನರ್ಜನ್ಮ )

ಸರ್ವರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು.....................

( ಚಿತ್ರ: ನಾನು ,ತಮ್ಮ ಹಾಗೂ ತಂಗಿ.....೨೩ ವರ್ಷಗಳ ಹಿಂದೆ:)-)

Wednesday, March 07, 2007

ಕಾವೇರಿ

ರಾಜ್ಯದ್ಯಾದಂತ್ಯ ಕಾವೇರಿಗಾಗಿ ಹೋರಾಟ
ಶಾಸನ ಸಭೆಯಲ್ಲಿಸಭಾಪತಿಗಾಗಿ ಕಿತ್ತಾಟ
ಇದೆಲ್ಲಾ ಕಾಗೆಗಳ ರಾಜಕೀಯದಾಟ
ಎಲ್ಲಿಯವರಗೆ ಕನ್ನಡಿಗರ ಪರದಾಟ?

ತಂದೆ-ಮಕ್ಕಳ ದಿವ್ಯಮೌನ,ಮೌನಂ ಸಮ್ಮತಿ ಲಕ್ಷಣವೇ?
ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆಯೆ?
ಮೇಲಿನ ಕೄಷ್ಣಾ ಆಂಧ್ರಕ್ಕೆ,ಈಗಕಾವೇರಿ ತಮಿಳುನಾಡಿಗೆ??
ಏಚ್ಚತ್ತುಕೊಳ್ಳಿ ಡೊಂಕುಬಾಲಕದ ನಾಯಕರೇ!

ಅಂಬಿ ರಾಜಿನಾಮೆ ಕಾವೇರಿಗಾಗಿ ಅನ್ನೋ ಗಿಮಿಕ್ಕು
ಮಂತ್ರಿಗಳ ಜನತಾ ದರ್ಶನ,ಸಾಲಮನ್ನಾದ ಚಮಕ್ಕು
ತಮಿಳಿರಿಗೆ ಸಿಂಹಪಾಲಿನಲ್ಲಿ ಕೇಂದ್ರದ ಕುಮ್ಮಕ್ಕು
ನಮ್ಮ ಶಾಸಕರು ಕತ್ತೆಕಾಯೊದಕ್ಕೆ ಲಾಯಖ್ಖು

ಬನ್ನಿ ಕನ್ನಡಿಗರ್‍ಏ ನಾವೆಲ್ಲಾ ಒಟ್ಟಾಗೋಣ
ನಮ್ಮ ಜಲ-ನೆಲ ಹಕ್ಕಿಗಾಗಿ ಹೋರಾಡೋಣ
ಕನ್ನಡ ಭಾಷೆ,ಸಂಸ್ಕೄತಿ ಉಳಿಸೋಣ
ಜಗತ್ತಿನ್ಯಾದಂತ ಕನ್ನಡಿಗರ ಕೀರ್ತಿ ಪತಾಕೆ ಹರಡೋಣ

Tuesday, March 06, 2007

ಹೋಳಿಯ ಸವಿನೆನಪುಗಳು..........

ಹೋಳಿಯ ಹುಣ್ಣಿಮೆಗೂ ನನ್ನ ಬಾಲ್ಯಕ್ಕೂ ತೀರದ ನಂಟು.ಈಗಿನ ಕಾಲ ಬಿಡಿ....ಟಿವಿಯನ್ನು ನೋಡ್ತಾ ಹೋಳಿಯ ಚಲನಚಿತ್ರಗಳ ಗೀತೆಗಳನ್ನು ನೋಡುತ್ತಾ ಕಳೆಯುದೇ ಆಗಿದೆ. ೪ ಹೋಳಿಯSMS, ೧೦ ಜನಕ್ಕೆ ಹೋಳಿಯ ಮೈಲ್ fwd ಮಾಡಿದ್ರೇ ಮುಗಿದುಹೊಯ್ತು.ಬೆಂಗಳೂರು ಹೋಳಿಯೇಂದ್ರೆ ನಮ್ಮ ಉತ್ತರ ಕರ್ನಾಟಕದ ಬರಗಾಲ ಜೆಲ್ಲೆಗಳನ್ನು ನೆನಪಿಸುತ್ತದೆ. ಏನು ಮಾಡತೀರಾ ಎಲ್ಲಾ ಜಾಗತೀಕರಣದ ಪ್ರಭಾವ. Pizzaವನ್ನೊ, happy hours ನಲ್ಲಿ ಒಂದು ಮಗ್ ಬೀರ ಜೊತೆ ಇನ್ನೊದು ಬೀರನ್ನು ಹೀರುತ್ತಾ ಆಫಿಸನಲ್ಲಿಯ,ರಾಜಕೀಯ ,ಪ್ರಮೋಶನ್ ಅಥವಾ ಹೊಸಾ offers/afailrs ಬಗ್ಗೆ ವೀಕೆಂಡ ಕಳೆದು ಹೊಗವದರಲ್ಲಿ ಸೃಜನಶೀಲತೆಗೆ ಅವಕಾಶವೆಲ್ಲಿ? ನೀವ್ವೇ ಯೋಚಿಸಿ.....ಹೋಳಿಯ ಬಗ್ಗೆ ಬರೆಯುತ್ತಾ ವಿಷ್ಯ ಎಲ್ಲೊಲ್ಲೋ ಹೊಗ್ತಾ ಇದೆ,ಮರಳಿ ಹೋಳಿಗೆ ಬರ್‍ಒಣ.....

"ಕಾಮಣ್ಣನ ಮಕ್ಳು,ಕಳ್ಳಸೂ.. ಮಕ್ಳು...ಎನೇನು ಕದಿಯಲು ಬಂದ್ರು, ಕಳ್ಳು ಕಟಗಿ ಕದಿಯಲು ಬಂದ್ರು" ಎಂದು ಅರಚುತ್ತಾ ಬೆಳ್ಳಂದಿಗಳಲ್ಲಿ ತೀರುಗುತ್ತಿದ್ದು, ಜೊತಗೆ ಹಲಗೆಯ ಪಕ್ಕವಾದ್ಯ,ಲಬೊ ಲಬೊ ಅಂತಾ ಹೊಯ್ಕೊಳ್ಳವ ಹಿನ್ನಲೆ ಸಂಗೀತ ಒಂದು ತರಾ ನಮ್ಮದೇ ಲೋಕವನ್ನು ಸೄಷ್ಟಿಸಿಬಿಡುತ್ತಿದ್ದವು. ಬಾಲ್ಯದ ಹೋಳಿಯಲ್ಲಾ ಕಳೆದಿದ್ದು ಬದಾಮಿ ಮತ್ತು ನವಿಲುತೀರ್ಥದಲ್ಲಿ....ವರ್ಷದ ಎಲ್ಲಾ ದಿನಗಳಲ್ಲಿ ನಮ್ಮ "ಮಂಗ್ಯಾತನಕ್ಕೆ" ಮತ್ತು ಹುಡಗಾಟಕ್ಕೆ ನಿಷೇದವಿದ್ದರೂ ಹೋಳಿಯ ಸಮಯದಲ್ಲಿ ಪೂರ್ಣ ವಿನಾಯತಿ. ಅದು ಬೇರೆ ಹೋಳಿ ನಮ್ಮ ವಾರ್ಷೀಕ ಪರಿಕ್ಷೆಯ ನಂತರ ನಮ್ಮನ್ನು ಹಿಡಿಯುವವರೇ ಇಲ್ಲಾ...ಬದಾಮಿಯ ನೀರಾವರಿಯ ವಸತಿಗೃಹಗಳ ಮುಂದೆ ಚಿಕ್ಕ ಗಾರ್ಡನವಿರುದು ಸಾಮಾನ್ಯ.ಹೋಳಿಯ ದಿನಗಳಲ್ಲಿ ಈ ಎಲ್ಲಾ ಗಾರ್ಡನಗಳ ಬೇಲಿ ಮಾಯವಾಗಿತ್ತಿದ್ದು ಸಾಮಾನ್ಯ.ಹೋಲಿಕಾಳು ಬೆಂಕಿಯಲ್ಲಿ ಪ್ರವೇಶವಾದದರಿಂದ, ಕಾಮದೇವ ಶಿವನ ಮೂರನೆ ಕಣ್ಣಿನಿಂದ ಸುಟ್ಟಿಹೋದ ಕಥೆ ನನಗಿಂತಾ ನಿಮಗೆ ಚೆನ್ನಾಗಿ ಗೊತ್ತಿರುವದರಿಂದ , ಆ ಬಗ್ಗೆ ಹೆಚ್ಚು ಹೇಳದೇ ನನ್ನ ಹೊಳಿಯ ಆಚರಣೆ ಬಗ್ಗೆ ಹೇಳತಾ (ಕೋರಿತಾ?) ಇದಿನಿ..
೧೫ ದಿನ ಮೊದಲು ಕಾಮಣ್ಣಪಟ್ಟಿ( ಹಣ)ದ ಕಲೆಕ್ಷನ್. ಹುಣ್ಣಿಮೆಯ ಬೆಳಂದಿಗಳ ರಾತ್ರಿಯಲ್ಲಿ ಕಾಮದಹನವಾದ ಮೇಲೆ ನಮ್ಮ ಬಣ್ಣದಾಟ. ಕಾಲೋನಿಯಲ್ಲಿರುವ ಎಲ್ಲಾ ಹುಡಗರು ಸೇರಿ,ನಮ್ಮದೇ ಒಂದು ಬೆಟಾಲಿಯನ ಮಾಡಿ ಮದ್ಯಾಹ್ನ ೧ ಘಂಟೆಯವರಗೆ ಬಣ್ಣ ಅಡಿದ್ದೇ ಅಡಿದ್ದು. ಎಲ್ಲಾ ಮೊರೆಗಳು ಒಂದೇ ಥರಾ.ದೇಹದ ಎಲ್ಲಾ ಭಾಗಗಳು ಬಣ್ಣದಿಂದ ಅಲಂಕೄತ. ಯಾರು ಯಾರು ಅನ್ನೊದನ್ನ ದ್ವನಿ ಮಾತ್ರದಿಂದ ಗುರಿತಿಸಬೇಕು..
ಬದಾಮಿಯ ಬಣ್ಣದ ಪರಿ ಆದರೆ ನವಿಲುತೀರ್ಥದ ಬಣ್ಣದ ರಂಗೆ ಬೇರೆ...ಕಾಲೋನಿಯಲ್ಲಿ ಆ ದಿನ ಬಣ್ಣದ ಪ್ರಪಂಚ. ಮನೆ ಗೊಡೆ, ಅಂಗಳ, ಗಿಡಮರಗಳು ಬಣ್ಣಮಯ.ಒಟ್ಟಿನಲ್ಲಿ ಬಣ್ಣ ಆ ದಿನ ಸರ್ವಾಂತ್ರಯಾಮಿ.೮-೧೦ ಡ್ರಮ್ಮುಗಳಲ್ಲಿ ತರಾವರಿ ಬಣ್ಣ ತುಂಬಿಕೊಂಡು ಒಂದು ಕಡೆಯಿಂದ ಪ್ರಾರಂಭವಾದ ಬಣ್ಣದ ರಂಗು,೩೫೦ ಮನೆಗಳು ಮುಗಿಯುವರಗೆ ದಣಿವರಿಯದ ಆಟ,ಈ ಓಕುಳಿಯಾಟ....ಎಲ್ಲಾ ಮುಖಗಳು ರಂಗುಬಿರಂಗು....ಬಣ್ಣ ಮುಗಿದ ನಂತರವು ಒಂದು ವಾರದವರೆಗೆ ನನ್ನ ಮುಖದಲ್ಲಿ ಬಣ್ಣದ ಕಲೆ ಇರುತಿತ್ತು.ಬಣ್ಣವಾದ ನಂತರ ನಾವೆಲ್ಲ ಸೇರಿ ಜಳಕ ಮಾಡಲು ಮಲಪ್ರಭಾ ಹೊಳಿಗೆ ಹೊಗುವ ಮಜಾನೇ ಬೇರೆ.... ಮನೆಯಿಂದ ಸುಮಾರ್ರು ೨ ಕಿ.ಮೀ ಇರುವ ಹೊಳೆಗೆ ಗುಡ್ಡವಿಳಿದು ಹೋಗುತ್ತಿದ್ದು ಒಂದು ಮಧುರ ಅನುಭವ.ನಮ್ಮ ಗುಂಪಿನ (೧೦-೧೨) ಜನರಲ್ಲಿ ಇಬ್ಬರಿಗೆ ಚೆನ್ನಾಗಿ ಈಸಲು ಬರುತಿತ್ತು.ಅವರಿಬ್ಬರೂ ಎಲ್ಲಿಯರಗೆ ಎಷ್ಟು ಆಳವಿದೆ ನೀರ್ಧರಿಸಿ ಒಂದು ಬೌಂಡರಿ ನೀರ್ಧರಿಸುತ್ತಿದ್ದರು.ಆ ಬೌಂಡರಿ ಒಂದು ಥರಾ ಲಕ್ಷಣ ರೇಖೆಯಿದ್ದ ಹಾಗೆ. ಯಾರು ಅದನ್ನು ದಾಟುವ ಪ್ರಯತ್ನ ಮಾಡೊ ಹಾಗಿರಲಿಲ್ಲ. ಆಗ ನಾನು ಗುಬ್ಬಿ ಜಳಕ (ಹೋಳೆ ದಂಡೆ ಸ್ನಾನ)ಮಾಡಿ, ನನ್ನ ಮುಖ ಬಣ್ಣ ಹೋಗಿ ನನ್ನಾದಾಯಿತು ಅನ್ನೊವರಗೆ ಜಳಕ ಮಾಡಿ, ಮನಗೆ ಬಂದು ಲಬೊ ಲಬೊ ಅಂತ ಹೊಯ್ಕಂಡ ಕೈಯಲ್ಲಿ ಹೊಳಿಗೆ ತಿನ್ನೋ ಸುಖ ವರ್ಣಿಸಲು ಸಾದ್ಯವಿಲ್ಲಾ ಬಿಡಿ..೫-೬ ವರ್ಷಗಳ ಈ ಹೋಳಿ ಆಚರಣೆ ನನ್ನ ಬದುಕಿನ ರಂಗು ರಂಗಿನ ಪುಟಗಳ ಎಂದು ಹೇಳಬಹುದು.


ಕಾಲ ಯಾರಿಗೆ ಕಾಯುತ್ತೆ ಹೇಳಿ.ಕಾಲ ಮುಂದುವರೆದ ಹಾಗೆ ಬಾಗಲಕೋಟೆ ಕಾಲೇಜಿಗೆ ಸೇರಿದ್ದಾಯಿತು... ಎಲ್ಲಾ ಕಡೆ ಬಣ್ಣದಾಟ ೧ ದಿನವಾದರೆ ಇಲ್ಲಿ ೫ ದಿನ.ಈಗ ಅದು ಮೂರು ದಿನಕ್ಕೆ ಇಳಿದಿದೆ.ಇಲ್ಲಿಯ ಜನ ಮೂರು ದಿನಾ ಜಳಕವನ್ನೇ ಮಾಡದೇ ಬರೇ ಬಣ್ಣ ಅಡುತ್ತಾ ಕಾಲ ಕಳೆಯುತ್ತಾರೆ. ಕೊನೆಯ ವರ್ಷದ ಹೋಳಿಯಂತು ಅವಿಸ್ಮರಣೀಯ.ಎಲ್ಲಾ ಸೇರಿ ಬಣ್ಣ ಬಳಿದುಕೊಂಡು ಲೇಡಿಜ್ ಹಾಸ್ಟೆಲ ಮುಂದೆ ಗಲಾಟೆ ಮಾಡಿದ್ದೇ ಮಾಡಿದ್ದು..ಮುಂದೆ ಕೆಲಸಕ್ಕಾಗಿ ಉತ್ತರಭಾರತಕ್ಕೆ ಹೊದಾಗ ಅಲ್ಲಿಯ ಹೊಳಿ ನೊಡಲು ಅವಕಾಶ ಸಿಕ್ಕಿತು... ಹಿರಿಕಿರಿಯರು ಎನ್ನದೇ,ಅಲ್ಲಿ ಎಲ್ಲರೂ ಓಕುಳಿಯಾಡಿ,ನಂತರ ಸಿಹಿ,ಬಾಂಗ್, ಕುಡಿತ ಅಲ್ಲಿ ಸರ್ವೆಸಾಮನ್ಯ.೨೦೦೪ರಲ್ಲಿ ಹೋಳಿಯ ಕಾಟ ಬೇಡವೆಂದು ನೈನಿತಾಲಗೆ ಹೊಗಿದ್ದವು.ಅಲ್ಲಿ ಹೊದ್ರು ಬಣ್ಣದಾಟ ತಪ್ಪಲಿಲ್ಲ..ಹೋಳಿಯ ದಿನಾ ಇಡಿ ಉತ್ತರ ಭಾರತ ಒಂಡು ತರಾ ಅಘೊಷಿತ ಬಂದ್ ಇದ್ದ ಹಾಗೆ..ಹೊರಗಡೆ ನಿಮಗೆ ಎನೂ ಸಿಗುವದಿಲ್ಲಾ.ಈ ದಿನ ತಿರುಗಿ ಬರುವಾಗ ಇದು ನಮ್ಮ ಅನುಭವಕ್ಕೆ ಬಂತು.ಸುಮಾರು ೩೦೦ ಕಿ.ಮೀವರಗೆ ಒಂದೇ ಒಂದು ತಗಿದಿರೊ ಧಾಬಾ ಸಿಗಲಿಲ್ಲ. ಅಂತು ಹೇಗೊ ಒಂದು ಧಾಬದವನ್ನು ಒಪ್ಪಿಸಿ ತುತ್ತಿನ ಚೀಲ ಭರ್ತಿ ಮಾಡಿ ಮುಂದುವರಿದೆವು.ಕಳೆದ ವರ್ಷದ ಹೋಳಿಯಲ್ಲಿ ಸೆಕ್ಟರ್ ೧೪ ಗುರಂಗಾವ ತುಂಬಾ ನಮ್ಮದೇ ಗದ್ದಲ.ಇರೊ ಬರೊರಿಗೆ ಬಣ್ಣ ಬಳಿದು ಬಂದಾಗ ಮತ್ತೆ ಅದೇ ಊಟದ ಸಮಸ್ಯೆ.ಬಾರಗಳು ಮಾತ್ರ ಅರ್ಧ ತೆರದಿದ್ದು ಬಿಟ್ರೆ ಬೇರೆ ಗತಿನೇ ಇಲ್ಲಾ.ಮನೆಯಲ್ಲಿ ಮಾಡೊಣ ಅಂದ್ರೆ ಬೇಕಾದ ಸಾಮಾಗ್ರಿಗಳೇ ಇಲ್ಲಾ..೪-೫ ಘಂಟೆಗೆ ಹೇಗೊ ಒಂದು ಧಾಬದ ನಂಬರ ಪತ್ತೆ ಮಾಡಿ ಊಟ ತರಿಸಿದೆವು ತೄಪ್ತಿ ಫಟ್ಟೆವು.
ಈ ಸಲದ ಹೋಳಿ ಬೈಲಹೊಂಗಲದಲ್ಲಿ... ಈ ಊರಿನ ಹೋಳಿ ತುಂಬಾ ವಿಶಷ್ಟತೆಯಿಂದ ಕೂಡಿದೆ.. ಬಣ್ಣದ ಹಿಂದಿನ ದಿನ ಓಣಿಯ ಸಣ್ಣಪುಟ್ಟ ದಹನವಾಗುವವು. ಮರುದಿನ ಬಣ್ಣವಾದ ಮೇಲೆ ಊರ ಚಾವಡಿಯ ಕಾಮಣ್ಣ ದಹನಕ್ಕೆ ಸಿದ್ದಪಡಿಸುತ್ತಾರೆ. ಈ ಕಾಮಣ್ಣನ ದಹನಕ್ಕೆ ಊರ ಹೊರಗಿರುವ ಹೊಲೆಯರ ಬೆಂಕಿಯೇ ಬೇಕು....ಅದು ಕೂಡ ಸುಲಭವಾಗಿ ಸಿಗುವದಿಲ್ಲ. ಸ್ವಲ್ಪ ಕಾದಾಟ,ಬಡೆದಾಟವಾದ ನಂತರ ಅಲ್ಲಿಂದ ಬೆಂಕಿ ಸಿಕ್ಕ ಮೇಲೆ, ಆ ಇಬ್ಬರೂ ಬೆಂಕಿ ಕೊಡುವವರು ಸುಮಾರು ೧.೫ ಕಿ.ಮಿ, ಬರಿಗಾಲಲ್ಲಿ ಕಾಮಣ್ಣವರಗೆ ಓಡಿ ಬಂದು ಬೆಂಕಿ ಕೋಡುತ್ತಾರೆ. ಕಾಮಣ್ಣ ಮುಖ ಯಾವ ದಿಕ್ಕಿಗೆ ಬಿಳ್ಳೊತ್ತೋ ಆ ಕಡೆ ಜಾಸ್ತಿ ಮಳೆ ಬೆಳೆ ಅಂತಾ ತಲತಲಾಂತರದ ನಂಬಿಕೆ..


ಮುಗಿಸುವ ಮುನ್ನ: ಮೊನ್ನೆ ಕೆಲಸದ ನಿಮಿತ್ತ ಬೈಲಹೊಂಗಲದ ನಮ್ಮ ಸೋದರ ಮಾವನ ಮನೆಯಲ್ಲಿದ್ದಾಗ, ಬಣ್ಣವಾಡಬಾರದೆಂದು ನೀರ್ಧರಿಸಿ ಮನೆಯಲ್ಲಿ ೮ ವರ್ಷದ ನಮ್ಮ ಮಾವನ ಮಗನ ಸವಾಲು " ಗಂಡಿಸ ಅಗಿದ್ಡರ ಬಂದು ಬಣ್ಣ ಆಡು ಮಾಮಾ"....ಸವಾಲಿನ ಆಳ,ಮಹತ್ವ ಎಲ್ಲಾ ನೀವ್ವೆ ಯೋಚಿಸಿ.

[ಹಲವಾರು ಕಾರಣಗಳಿಂದ ನನ್ನ ಬ್ಲಾಗ್ ಒಣಗಿದ ಮರವಾಗಿತ್ತು. ಅದನ್ನು ಮತ್ತೆ ಪೊಷಿಸಲು ಉತ್ತೇಜನ ಕೊಟ್ಟ ಪ್ರೇಮಿ ಶಿವ, ಅನ್ವೇಷಿ,ಹಿರಿಯರಾದ ಶ್ರೀಗಳಿಗೆ ಮತ್ತು ಹಲವು ಮಿತ್ರರಿಗೆ ಧನ್ಯವಾದಗಳು.]