Monday, November 12, 2018

ಬೈಲಹೊಂಗಲವೆಂದರೇ.......................

ಬೈಲಹೊಂಗಲವೆಂದರೇ,ನಮ್ಮ ಅಜ್ಜನ ಊರು, ನಮ್ಮ ಅವ್ವನ ತವರುಮನೆ ,ನಾನು ಚಿಕ್ಕವನಿರುವಾಗ ಹೋಗುತ್ತಿದ್ದ ರಾಜ ದಿನದ ಮೋಜಿನ ಊರು, ನಮ್ಮ ಮಾವಂದಿರ ಮದುವೆಗಳು,ಶಿಸ್ತಿನ ವಕೀಲ ಮಾವ,ಎಲ್ಲದಕ್ಕೂ ಬೆಂಬಲ ಮತ್ತು  ಪ್ರೋತ್ಸಾಹ ಕೊಟ್ಟ ಮಹಾಂತೇಶ  ಮಾವ.
              ಬೈಲಹೊಂಗಲವೆಂದರೇ, ಕಲ್ಮಠ ಗಲ್ಲಿ,ಚನ್ನಮ್ಮ ಸಮಾಧಿ,ರಾಣಿ ಚೆನ್ನಮ್ಮ ಇಟ್ಟಿದ್ದ  ಹಳೆ ಜೈಲು,ಹಾಲು ಬಿದ್ದಿರುವ ಕಲ್ಮಠ ಬಾಂವಿ,ಮೂರು ಸಾವಿರದ ಮಠದ ಗಂಗಾಧರ ಸ್ವಾಮಿಗಳು ,ಗಂಡು ಮೆಟ್ಟ್ಟಿದ ನಾಡು ,ಸಂಗೊಳ್ಳಿ ರಾಯಣ್ಣ ಕೂಟ,ಗೊಂಬಿ ಗುಡಿ,ಶುಕ್ರವಾರದ ಸಂತೆ,"ಲೇ ಮಾವ " ,ಎನ್ನುವ ಪ್ರೀತಿಯ ಕರೆ,"ನಿನ್ನ ಹಿರಾ....." ಎನ್ನುವ ಸಾಮಾನ್ಯ ಬೈಗುಳ.
                  ಬೈಲಹೊಂಗಲವೆಂದರೇ, ಎಂ.ಜೆ. ಹೈಸ್ಕೂಲ,ಆ ಸ್ಕೂಲನ ಮೈದಾನದಲ್ಲಿ ಬೊಂಗಾಳೆ ಹುಡಗರ ಜೊತೆ ಆಡಿದ ಕ್ರಿಕೆಟ್ ಮ್ಯಾಚುಗಳು,ಜವಳಿಕೂಟ ,ಮಡ್ಡಿ ಬಸವಣ್ಣ ಜಾತ್ರಿ,ಡಮ್ಮನಗಿ,ಮಾಳೋದೆ ,ಬಾಗೇವಾಡಿ ಅವರ ಅಂಗಡಿಗಳು,ಸಂಗಮ ಕ್ಯಾಂಟೀನಿನ ಮಿರ್ಚಿ ಬಜಿ,ಅಶ್ವಿನಿ ಟೀ ಬಾರನ ಪುರಿ ಬಾಜಿ ಮತ್ತು ಚಾ, ನಮ್ಮ ಅಜ್ಜನ ಎಲ್ಲಾ ಮಕ್ಕಳ ಮದುವೆಗಳಾದ ಪುಣ್ಯಕ್ಷೇತ್ರ ಮೌನೇಶ್ವರ ಗುಡಿ,ಶನಿವಾರಕೊಮ್ಮೆ ಭೇಟಿ ಕೊಡುತ್ತಿದ್ದ ಹನುಮಂತ ದೇವರ ಗುಡಿ, ಅದರ ಹಿಂದಿನ ಕೇರಿ,ತಾಲೂಕ ಗ್ರಂಥಾಲಯ,ಬೆಳಗಾವಿ ರೋಡು.
                     ಸಣ್ಣನಿರುವಾಗ ಆದ ಮಾವನ ಜೊತೆ ಆದ ಚರ್ಚೆಗಳು,ನಮ್ಮ ಅಜ್ಜನ ಮುನ್ನವಳ್ಳಿಯ ಮತ್ತು ಗದಗದ ಹೋರಾಟದ ಬದುಕು,ಅವನಿಗೆ ಬದುಕು ಕಟ್ಟಿಕೊಟ್ಟ ಬೈಲಹೊಂಗಲ,ಚಿಕ್ಕೊಪ್ಪದ ಅವನ ಹೊಲಗಳು,ನಮ್ಮ ಅಜ್ಜಿಯ ಕಾಶವ್ವನ ಹೆಸರು ಬೇಳೆಯ "ದ್ವಾಸಿ", ದಿನ ಬೆಳಿಗ್ಗೆ ಸೈಕಲ್ ಮೇಲೆ ಬರುತ್ತಿದ ಕರಿಕೊಪ್ಪದ ಅಜ್ಜ,ಸಂಜೆ ತಪ್ಪದೇ ಬರುತ್ತಿದ್ದ ತಟವಟಿ ಅಜ್ಜ ಎಲ್ಲವೂ ನೆನಪಿಗೆ ಬರುವವು.
  ಚಿಕ್ಕವನಿರುವಾಗ ನಾನು ಸೈಕಲನಲ್ಲಿ ಗುದ್ದಿ ತೆಲೆ ಓಡಿಸಿಕೊಂಡ ಹುಡುಗ,ಪೊಲೀಸನಾಗಿದ್ದ ಅವರಪ್ಪ ನನ್ನ ಸೈಕಲ್ ಕಸಿದುಕೊಂಡದ್ದು,ನಾನು ಹುಟ್ಟಿದ ಸರಕಾರಿ ದವಾಖಾನೆ,ಹಣಮಂತಗಡ ಹಾಸ್ಪಿಟಲ, ೫ ರೂಪಾಯಿಗೆ ನೋಡುತ್ತಿದ್ದ ಖಾಸನೀಶ ಡಾಕ್ಟರು .
          ಬೈಲಹೊಂಗಲವೆಂದರೇ, ನಾನು ಓದಿದ ಮ್ಯಾಗಿನ ಕಾಲೇಜು,ಕಾಲೇಜು ಪಾಸ್ಸು,ಆರ್ಡಿನರಿ ಬಸ್ಸಿನ ತುಂಬಕೊಂಡಿರುವ ಹುಡುಗ-ಹುಡುಗಿಯರು.physicನ ಪಾಟೀಲ ,ರೇವಣಕರ್ ,ಕೆಮೆಸ್ಟ್ರಿಯ ಶರಣಪ್ಪವನರ,ಸರೂರ್,ಪಟ್ಟಣಶೆಟ್ಟಿ ಗುರುಗಳೆಲ್ಲ ನೆನಪಿಗೆ ಬರುತ್ತಾರೆ.ರೇವಣಕರ ಸರ ಅತ್ಯಂತ ಸರಳವಾಗಿ ವಿವರಿಸಿದ ಅಣುವಿನ ಸಮ್ಮಿಲನ(Fusion) ಮತ್ತು ವಿದಳನ  (Fission) ವಿವರಣೆ,ಲ್ಯಾಬಗಳು,ರವಿವಾರದ N.C.C ಕ್ಲಾಸಗಳು,ಬಾಬು ಜೊತೆ ಹೋಗಿದ್ದ ಹುಲಕೋಟಿಯ national integration camp,ಗಿರೀಶ, ಕಮ್ಮಾರ,ಬಾಬು ಅವರ ಗುಂಪು,ಬೈಕ ವೀರರಾದ ಸಾಲಿಮಠ,ಮಾಳೋದೆ,ಕಿರಣ,ಗದಗ ಮತ್ತೀತ್ತರು.ದೊಡ್ಡಮನಿ ಸರ ಟ್ಯೂಷನ,ಜಗದೀಶ ತಟವಟಿ ಪವಾಡ ಸದ್ರಶವಾಗಿ ಲಾರಿ ಮತ್ತು ಬೈಕ ಅಪಘಾತದಲ್ಲಿ ಪಾರು ಆಗಿದ್ದು,ಹೊಸೂರಿನ ಬಸು ಮತ್ತು ಗೆಳಯರು,ಗಿರೀಶ್ ಮನೆ, ಹಲಸಗಿ ,ಮತ್ತು ದೇಶನೂರ ಸರ ಜೊತೆ ಮಾತುಕತೆಗಳು ನೆನಪಿಗೆ ಬರುತ್ತವೆ.
                          ಕೊನೆಯದಾಗಿ ನನ್ನ ಆಪ್ತ ಮಿತ್ರ ಮಂಜುನಾಥ ಸೂರಿ,ಅವನ ಜೊತೆ ಓದಿದ ಓದು,ಅವನ ಲೂನಾ,ಬಸ್ ನಿಲುಗಡೆ ಹಿಂದುಗಡೆ ಇರುವ ಬಾಗವಾನ್ ಚಾಲನಲ್ಲಿದ್ದ ಅವರ ಮನೆ ನೆನೆಪಿಗೆ ಬಂದು ಮನಸ್ಸು ಭಾರವಾಗುತ್ತದೆ. ಬೈಲಹೊಂಗಲನಲ್ಲಿ ಓದು ಮುಗಿಸಿ ನಿಡಸೋಸಿನಲ್ಲಿ ಎಂಜಿನಿಯರ ಓದಿ,ಪುಣೆಯಲ್ಲಿ ಸುಮಾರು ವರ್ಷ ಕೆಲಸ ಮಾಡಿ,ಬೆಂಗಳೂರಿಗೆ ಬಂದಿದ್ದ ಮಂಜು ಜೊತೆ ನೋಡಿದ ನಾಲ್ಕಾರು ನಾಟಕಗಳು,ಸಿನೆಮಾಗಳು ವಿಷಾದದ ಛಾಯೆ ಬರುತ್ತದೆ.ಆ ದಿನಗಳಲ್ಲಿ ನಿಶ್ಚಿತಾಥವಾಗಿದ್ದ ಅವನ  ಅಪೇಂಡಿಸ್ಕ ಬರ್ಸ್ಟ್(apendix burst) ಆಗಿ ಮಣಿಪಾಲನಲ್ಲಿ ಅಡ್ಮಿಟ್ ಮಾಡಿದ್ದು,ಉದಯ ತುಂಬಾ ಓಡಾಡಿದ್ದು,blood transfusion) ಮಾಡಿ ಕೂಡ ಉಳಿಯಲಾರದ.
                                       ಅತಿ ಚಿಕ್ಕ ವಯಸ್ಸಿನಲ್ಲಿ(೨೯) ಬದುಕಿಗೆ ವಿದಾಯ ಹೇಳಿದ ಮಂಜು,ಅವನ ತಾಯಿ,ಈಶ್ವರ,ಆದಾಯ ಮಾಳೋದೆ ಜೊತೆ ಅತಿ ಜೋರಾಗಿ ದುಃಖ ತೋಡಿಕೊಂಡಿದ್ದು,ಅವನ ಸಹೋದರರ ಮತ್ತೆ ತಂದೆ ಹತಾಶ ನೋಟ ನೆನಪಿಗೆ ಬಂದು ಹೃದಯ ಭಾರವಾಗುತ್ತದೆ.

(ಪ್ರೇರಣೆ: ಜಯಂತ ಕಾಯ್ಕಣಿ ಅವರ ಆಂಕೋಲೆಂದರೆ ಲೇಖನ )Saturday, March 28, 2015

ಕಡಲು


ಕಡಲಿನ ಅಲೆಗಳ ಮೊರೆತ
ಮನಸಿನ ವಿಚಾರಗಳ ಭೊರ್ಗರಿತ
ಸಾಗರ ಕಾಣಿಸಿದೆ ಉಲ್ಲಾಸ
ಮನ ತುಂಬಿ ಬಂದಿದೆ ಸಂತಸ

ತುಂಬಿದೆ ಭೂಮಿಯ ಒಡಲು
ನಾ ದೊಡ್ಡವ ಅನ್ನುವ ತೇವಲು
ಸಾಗರದ ಎದರು ನಾವೆಷ್ಟು ಕೇವಲು
ಸ್ಠಿತಿಪ್ರಜ್ಞೆಯಂತೆ ಅನವರತ ಕಡಲು

ಸಿದ್ದಾರ್ಥ ಬುದ್ದನೇಕೆ ಆದ ?
ಅವನಿಗೆ ಬೇಕಿತ್ತೆ ಸಂಸಾರದ ಮೊಕ್ಷ್ಯ ?
ಕಳೆದುಕೊಂಡ ಪರಿವಾರದ ಸಖ್ಯ
ಎಲ್ಲ ಬುದ್ದನಂತರಾದರೆ ಬೆಳೆಯುವದೇ ಜಗತ್ತು?

ಯಾರಾದರೂ ಪಾರಾಗುವುದೇ ಸಂಸಾರದ ಚಿಂತೆ?
ಅನಿಸುವುದು ಇರಬೇಕು ಬಹುಬಲಿಯ ಹಾಗೆ...
ಹಮ್ಮು ಬಿಮ್ಮುಗಳನು ಬಿಸಾಕಿ ಆಚೆ
ನಿರ್ಗವ ಶಾಂತ ಮಂದಸ್ಮಿತನಂತೆ.....

Sunday, February 22, 2015

ಸಿಡ್ನಿ ಮತ್ತು ಮಳೆ

ಸಿಡ್ನಿ ವಲಸೆ ಬಂದೂರು
 ಹೊರಗಡೆ ಬಿಸಿಲು ಜೋರು
 ಮೊದಲ ದಿನಗಳು ಕಡು ಬೋರು
 ಅವಕಾಶದ ಹುಡುಕಾಟದ ಕಾರುಬಾರು  !1!

 ಸೆಂಟ್ರ್ ಲಿಂಕ್,ಬ್ಯಾಂಕ್,ಮೆದಿಕೆರನಲ್ಲಿ ಮೊದಲ ವಾರ
ಸಂಜೆ ಸೀಕ್.ಕಾಮನಲ್ಲಿ ಜಾತಕದ ಪ್ರವರ
 ಯಾರಾದರೂ ಕರೆ ಮಾಡುವವರೇ? ಎಂಬ ಕಾತುರ
 ಮುಗಿದಿದ್ದು ತಿಳಯಲಿಲ್ಲ ಮೊದಲ ವಾರ   !2!

 ಮಗಳು,ಮಡದಿ ಬೆಂಗಳೂರಿಗೆ ಪಯಣ
ಅನಿಸಿತಿಲ್ಲಿ ಮಾಡವದು ಸಂಸಾರ ಕಠಿಣ
ಕೆಲಸದ ಅಲೆದಾಟ ನಿತ್ಯ ನವನವೀನ
ಬ್ರೆಡ್ಡ್ಡು,ಅನ್ನ,ಉಪ್ಪನಿಕಾಯಿಯೇ ನನ್ನ ಜೀವನ   !3!

 ಮಳೆ ಮತ್ತೆ ಬರುತಿದೆ,
 ಹಳೆಯದೆಯಲ್ಲ ನೆನಪಿಸುತಿದೆ
 ಮಳೆಯ ಶಕ್ತಿ ಅಪಾರ
 ಮಗಳ ನೆನಪು ನಿರಂತರ   !4!

 ಇರುವದೆಲ್ಲವ ಬಿಟ್ಟು ಇರದುದಕಡೆ ತುಡಿಯುವದೆ ಜೀವನ
 ಕವಿ ಅಡಿಗರ ಸಾಲು ನಿರಂತರ ಸತ್ಯ
ಹೊಂದಿಕೊಂಡು ಬೇಗ,ಸಂಸಾರ ಕರೆಸುವಲ್ಲಿ ಗಮನ
ತಲುಪುವನೇ ನಾನು ನಿರ್ಧರಿಸಿದ ಗಮ್ಯ???   !5!

Tuesday, December 31, 2013

ನಾಟಕದ ಗೀಳು ಮತ್ತು ಪ್ರದೀಪ ನಾಡಿಗೇರ."ಲೇ ಮಾಂತ್ಯಾ ನಾಳೆ ನಮ್ಮ ನಾಟಕ ರಂಗಶಂಕರ/ರವೀಂದ್ರ ಕಲಾಕ್ಷೇತ್ರದಲ್ಲಿದೆ,ತಪ್ಪದೇ ಬಾ." ಅಂತ ನನಗೆ ಪ್ರದೀಪ(ಪದ್ಯಾ) ಹೇಳುವುದು ಮಾಮೂಲು. ಹಾಗೆ ನೋಡಿದರೆ,ನನಗೆ ನಾಟಕದ ಗೀಳು ಹಿಡಿಸಿದ್ದೇ ಪ್ರದೀಪ ನಾಡಿಗೇರ ಅನ್ನುವ ಶಿವಮೊಗ್ಗೆಯ ಕನಸುಗಣ್ಣಿನ ಹುಡುಗ.
೨೦೦೨, ನಮ್ಮ ಇಂಜಿನೀಯರಿಂಗನ ಕೊನಯ ವರ್ಷದ ದಿನಗಳು. ಕೆ.ಎಲ್.ಇ ಬೆಳಗಾಂವಿ ಇಂಜಿನೀಯರಿಂಗನ ಪ್ರಿನ್ಸಿಪಾಲರು ತಮ್ಮ ತಂದೆ/ಅಜ್ಜನ ನೆನಪಿಗೊಸ್ಕರ ನಾಟಕೊತ್ಸವವನ್ನು ಉತ್ತರ ಕರ್ನಾಟಕದ ಇಂಜಿನೀಯರಿಂಗ ಕಾಲೇಜುಗಳಿಗಾಗಿ ಎರ್ಪಡಿಸಿದ್ದರು.ನಾನು ಅಲ್ಲಿ ಕೊನಯ ವರ್ಷದ ಪ್ರೊಜಕ್ಟಗಾಗಿ ಬೆಳಗಾಂವಿಲ್ಲಿದ್ದಾಗ,ಪ್ರದೀಪ ತನ್ನ ತಂಡ (ಸ್ನೇಹಿತರು,ಕಾಲೇಜು ಜ್ಯೂನಿಯರ್ಸ) ಕಟ್ಟಿಕೊಂಡು ಬಂದಿದ್ದ. ಮೊದಲು ಎರಡು ಮೂರು ನಾಟಕಗಳು ಹಿಂದಿ ಮತ್ತು ಇಂಗ್ಲಿಷನಲ್ಲಿದ್ದ ಹಾಗೆ ನೆನಪು.ಪ್ರದೀಪನ ತಂಡದ "ಆಕಸ್ಮಿಕ" ನಾಟಕ ಶುರುವಾದಾಗ ಗೌಜು ಗದ್ದಲ,ಕನ್ನಡ ನಾಟಕವೆನ್ನುವ ಅಲಕ್ಷ್ಯ ಬೇರೆ.ಅದಿದ್ದದ್ದು ಕೆಲವೇ ಕ್ಷಣ. ನಾಟಕ ಮುಂದುವರದಂತೆ,ಇನ್ನು ಆಳಕ್ಕೆ ಇಳಿದಂತೆ ನೆರದಿದ್ದ ಪ್ರೇಕ್ಷಕರೆಲ್ಲರೂ ಮಂತ್ರಮುಗ್ದ.ನಾಟಕ ಮುಗಿಯುವರಗೆ ತಮ್ಮ ಸ್ಥಳ ಬಿಟ್ಟು ಕದಲಲಿಲ್ಲ.ಪ್ರದೀಪನು ಮುಖ್ಯ ಪಾತ್ರದಲ್ಲಿದ್ದು,ನಿರ್ಧೇಶನ ,ರಂಗ ಸಜ್ಜಿಕೆ ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದ ಹೊಣೆ ಹೊತ್ತಿದ್ದ.ಆ ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿದ.ನಾಟಕ ಶುರುವಾದಗಿನ ಟೆಂಪೊ ,ನಾಟಕ ಮುಗಿಯುವವರಗೆ ಹಿಡಿದು ,ನಾಟಕವವನ್ನು ಯಶಸ್ವಿಯಾಗಿಸಿದ.ಯಾವದೇ ಅನುಭವಗಳಿಲ್ಲದ ಪ್ರಸಾದ, ಅರವಿಂದ, ಸಿದ್ದಾರ್ಥ ಭಟ ಮತ್ತಿತ್ತರ ಜೊತೆಯಲ್ಲಿ ಕಟ್ಟಿಕೊಟ್ಟ ’ಆಕಸ್ಮಿಕ’ ಪ್ರೇಕ್ಷಕರಿಗೆಲ್ಲ ಮೋಡಿ ಮಾಡಿತು.ನಾಟಕದಲ್ಲಿ ಕನಸು ಬೀಳುವ ಬಗೆ ತೋರಿ,ಮುಂದೆ ಎನಾಗುತ್ತೆ ಎನ್ನುವ ಕುತೂಹಲ ಕೊನೆಯವರಗೆ ಉಳಿಸಿಕೋಂಡ "ಆಕಸ್ಮಿಕಕ್ಕೆ" ಪ್ರಥಮ ಬಹುಮಾನ ಸಿಗುವಂತೆ ಮಾಡಿದವು.ಎಲ್ಲರ ನಿರೀಕ್ಷೆಯಂತೆ ಪ್ರದೀಪಗೆ ಅತ್ತ್ಯತ್ತಮ ನಟ ಹಾಗು ಇನ್ನು ಹಲವಾರು ಪ್ರಶಸ್ತಿಗಳ ಸುರಿಮಳೆಯಾಯಿತು. ಮುಂದೆ ಇದೇ ನಾಟಕವನ್ನು ನಮ್ಮ ಕಾಲೇಜಿನ (ಬಸವೇಶ್ವರ ಇಂಜಿನೀಯರಿಂಗ ಕಾಲೇಜು) ಆನ್ಯುವಲ್ ಡೇನಲ್ಲಿ ಆಡಿಸಿ ಎಲ್ಲರಿಂದ ಸೈ ಅನ್ನಿಸಿಕೊಂಡ.
ಮುಂದಿನ ವರ್ಷ(೨೦೦೩) ಪ್ರದೀಪನ ಇಂಜಿನೀಯರಿಂಗನ ಕೊನೆ ವರ್ಷ, ಮತ್ತೆ ಕೆ.ಎಲ್.ಇ ಬೆಳಗಾಂವಿ ಪ್ರದೀಪ ಮತ್ತು ತಂಡ ’ಮಳೆ ನಿಲ್ಲುವವರಗೆ’ ಅನ್ನುವ ನಾಟಕ. ಮುಖ್ಯ ಪಾತ್ರಧಾರಿಯಾಗಿ ಸೇಲ್ಸಮನನಾಗಿ,ನಿರ್ಧೇಶನ,ರಂಗ ಸಜ್ಜಿಕೆ,ಪ್ರಸಾಧನ ಮತ್ತು ಹಿನ್ನಲೆ ಸಂಗೀತದಲ್ಲಿ ಪ್ರದೀಪ ಮತ್ತೊಮ್ಮೆ ಯಶಸ್ವಿಯಾದ.ಮಳೆ ಹನಿ ಬೀಳುವ ಟಪ್ ಟಪನ ಹಿನ್ನಲೆ ಸಂಗೀತ, ಪ್ರದೀಪನ ಅತ್ತುತ್ತ್ಯಮ ಅಭಿನಯ ಪ್ರಸಾದ,ಸಿದ್ದಾರ್ಥ ಭಟರ ಲವಲವಿಕೆಯ ಅಭಿನಯ ,ಮತ್ತೆ ಪ್ರದೀಪ ತಂಡಕ್ಕೆ ಪ್ರಥಮ ಬಹುಮಾನ.ಮೂರನೇ ವರ್ಷ ಭಾಗವಹಿಸಿದ್ದರೇ, ಹ್ಯಾಟ್ರಿಕ್ ಸಾಧನೆ ಮಾಡುವದರಲ್ಲಿ ಯಾವದೇ ಸಂಶಯವಿರಲಿಲ್ಲ.

ಬೆಂಗಳೂರಿಗೆ ಬಂದ ಮೇಲೆ, ಸಾಪ್ಟವೇರನಲ್ಲಿ ಬದುಕು ಕಟ್ಟಿಕೊಂಡ ಮೇಲೆ, ಮತ್ತೆ ಪ್ರದೀಪಗೆ ಹವ್ಯಾಸಿ ರಂಗಭೂಮಿಯ ಸೆಳತ. ಕಲಾ ಗಂಗೋತ್ರಿ ಹವ್ಯಾಸಿ ರಂಗತಂಡದೊಡನೆ ನಂಟು. ಕಲಾ ಗಂಗೋತ್ರಿ ನಾಟಕಗಳಾದ, ಮೈಸೂರು ಮಲ್ಲಿಗೆಯ ಮೊದಲಿನ ಪ್ರದರ್ಶನಗಳಲ್ಲಿ ಯುವ ಪ್ರೇಮ ಕವಿಯಾಗಿ,ಇತ್ತಿಚೀನ ದಿನಗಳ ಪ್ರದರ್ಶನಗಳಲ್ಲಿ ಬಳೆಗಾರ ಚೆನ್ನಯ್ಯನಾಗಿ,ಕನ್ನಂಬಾಡಿ ಕಟ್ಟದಿದ್ದರೆಯಲ್ಲಿ ಮೈಸೂರು ಮಹರಾಜನಾಗಿ, ಮಂದ್ರದಲ್ಲಿ ಸಂಗೀತಗಾರನಾಗಿ, ಮೂಕಜ್ಜಿಯ ಕನಸುಗಳಲ್ಲಿ ನಾರಯಣನಾಗಿ ರಂಗಭೂಮಿಯಲ್ಲಿ ಸಕ್ರೀಯ.    ೨೦೧೨ರಲ್ಲಿ ೮-೧೦ ಹವ್ಯಾಸಿ ಕಲಾವಿದರು ಸೇರಿ ರಚಿಸಿದ ’ಯುವಶ್ರೀ’ ತಂಡದ ಸೂತ್ರದಾರ.ವಿಜಯ ಕರ್ನಾಟಕದ ಯುವ ಘರ್ಜನೆ ನಾಟಕ ಉತ್ಸವದಲ್ಲಿ,ಡಾ.ಚಂದ್ರಶೇಖರ ಕಂಬಾರ ರಚಿತ "ಹರಕೆಯ ಕುರಿ" ನಾಟಕದ ನಿರ್ದೇಶನ ಮತ್ತು ದ್ವೀತಿಯ ಸ್ಥಾನ.

ಕಂಡ ಕನಸು ಬೆನ್ನು ಹತ್ತಿ,ಅದನ್ನು ಸಾದ್ಯವಾಗಿಸಿಕೊಂಡು,ಹವ್ಯಾಸಿ ರಂಗಭೂಮಿಯಲ್ಲಿ ತಲ್ಲೀನ.೨೦೧೩ ವರ್ಷದ ಕೊನೆ ದಿನ(೩೧/೧೨/೨೦೧೩) ಪ್ರದೀಪ ನಿರ್ದೇಶನ ಹರಕೆಯ ಕುರಿ ರಂಗಶಂಕರದಲ್ಲಿ ಯಶಸ್ವಿಯಾಗಿ(ಫ಼ುಲ್ ಹೌಸ್) ಪ್ರದರ್ಶನ ಕಂಡದ್ದನ್ನು ನೋಡಿ ತುಂಬಾ ಸಂತಸಪಟ್ಟವರಲ್ಲಿ ನಾನೊಬ್ಬ.

ನನಗೆ ನಾಟಕದಲ್ಲಿ ಆಸಕ್ತಿ ಮೂಡಿಸಿ, ಅದ್ದನ್ನೇ ಗೀಳಾಗಿಸಿದ ಪ್ರದೀಪ ಹವ್ಯಾಸಿ ರಂಗಭೂಮಿಯಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ ಎಂದು ಹಾರೈಸುವ,

ಮಹಾಂತೇಶ.

Wednesday, April 06, 2011

ಗೋವಾದ ಚಾರಣ ಚಿತ್ರಗಳು 2009-2010


ಚಿಕ್ಕದಾದ -ಚೊಕ್ಕವಾದ ರಸ್ತೆಗಳು,ಬೈಕನಲ್ಲಿ ಓಡಾಡುತ್ತಿರುವ ಪ್ರಣಯಜೋಡಿಗಳು,ದಾರಿಯುದ್ದಕ್ಕೂ ಒಂದು ಕಡೆ ಕಾಣುತ್ತಿರುವ ಸಮುದ್ರ,ಕೊಂಕಣಿ ಮತ್ತು ಮರಾಠಿ ಮಿಶ್ರಿತ ಭಾಷೆಗಳಲ್ಲವೂ ಕಂಡು ಬಂದದ್ದು ಗೋವಾದ ಪಣಜಿಯಲ್ಲಿ.ನಾನು ನನ್ನ ಹೆಂಡತಿ ಗೌರಿ ಡಿಸೆಂಬರ್ ೨೦೦೯ರ ಯೂತ್ ಹಾಸ್ಟೆಲ್ ಗೋವಾದ 7 ದಿನದ ಚಾರಣಕ್ಕೆ ರವಿವಾರ ಪಣಜಿಯ ಬೆಸ್ ಕ್ಯಾಂಪ್ ಸ್ಪೋರ್ಟ್ ಅಥಾರಿಟಿ ಮೈದಾನ ತಲುಪಿದಾಗ ನೋಡಿದ್ದು,ಸಾಲಾಗಿ ನಿಂತ ಸೈಕಲಗಳು,ಗಡಿಬಿಡಿಯಲ್ಲಿರುವ ಯೂತ್ ಹಾಸ್ಟೇಲನ ಸಿಬ್ಬಂದಿಗಳು,ಮೊಬಲ್ ಚಾರ್ಜಿಂಗ ಪಾಯಿಂಟನಲ್ಲಿ ನೋಣಗಳ ಹಾಗೆ ಮುಕ್ಕಿರುವ ಜನಗಳು,ಅಲ್ಲಿ ಹಾಕಿರುವ ಟೆಂಟಗಳು,ರಾತ್ರಿ ಅಡುಗೆಗಾಗಿ ತರಾವರಿಯಿಂದ ಒಡಾಡುತ್ತಿರುವ ಅಡುಗೆಯವರು, ಚಾರಣ ಮುಗಿಸಿ ಸುಸ್ತಾಗಿ ಬಂದ ಸುಸ್ತಾದ ಮುಖಗಳು,ನಾಳೆ ಚಾರಣಕ್ಕೆ ಕಾತುರದಿಂದ ಕಾಯಿತ್ತಿರುವ ಹೊಸ ಮುಖಗಳು.ನಾವು ನೋಂದಣಿ ಮಾಡಿ, ಮರುದಿನ ಮಾಹಿತಿ ಕೇಳಿ ನಮ್ಮ ತಂಡದ ಪರಿಚಯ ಮಾಡಿಕೊಂಡು,ಸ್ವಲ್ಪ ಹೊತ್ತು ತಿರುಗಿ ನಿದ್ದೆಗೆ ಶರಣು.
ನಮ್ಮದು ಚಾರಣದಲ್ಲಿ 13ನೇ ತಂಡ. ನಮ್ಮ ತಂಡದಲ್ಲಿ ಕೇವಲ 20 ಜನ. ಅದಂತೂ ನನಗೆ ತುಂಬಾ ಅನಕೂಲವಾಯಿತು. ತುಂಬಾ ಜನವಿದ್ದಷ್ಟು ಗೌಜು ಗದ್ದಲ ಜಾಸ್ತಿ. ತಂಡದಲ್ಲಿ 5 ಜನ ಮರಾಠಿ ಅಂಕಲಗಳು ಮುಂಭೈನಿಂದ.ಈ ಜನಗಳು ಮೂಡನಂಬಿಕೆಗಳ ವಿರುದ್ದ ಹೊರಾಡುವ ಸಂಘಟನೆಯ ಸದಸ್ಯರು. ಆರ್ಕಿಟೆಕ್ಟಗಳಾದ ಮೇಘಾ ಮತ್ತು ನಿಶ್ಚಿತಾ ಅನ್ನೊ ಬೆಂಗಳೂರಿನ ಮಾಡ್ ಹುಡಗಿಯರು,ಮೂರು ಜನ ಡೆಲ್ಲಿಯಿಂದ,ಅನುರಾಧ ಮತ್ತು ಸಂಗೀತಾ ಅನ್ನೊ ಅಂಟಿಯರು ಮುಂಬೈನಿಂದ ,ಮೂರು ಜೋಡಿಗಳು ಕರ್ನಾಟಕ, ಆಂದ್ರಪ್ರದೇಶ ಮತ್ತು ನಾಸಿಕನಿಂದ.
ಮರುದಿನ (ಸೋಮವಾರ) ಬೆಳಿಗ್ಗೆ 6.೦೦ ಘಂಟೆಗೆ ರಾಪಲ್ಲಿಂಗ್(Rapelling). ಕೆಲವು ಜನ ಆರಾಮವಾಗಿ ಮಂಗನ ಹಾಗೆ ಮೇಲೆ ತಲುಪಿದರೆ,ಕೆಲವು ಜನ ಒದ್ದಾಡುತ್ತ, ತೇಕುತ್ತಾ,ಉಸಿರು ಹಾಕುತ್ತ ಮೇಲೆ ತಲುಪಿದ್ದು ನೋಡಕ್ಕೆ ತಮಾಷೆಯಾಗಿತ್ತು. ನಂತರ 1 ಘಂಟೆ ವಿರಾಮದ ನಂತರ ವಾರ್ಮ್-ಅಪ್ ಅಂತ ಮಿರಾಮರ್ ಬೀಚಗೆ ಪಯಣ.ಪಣಜಿಯ ಯೂತ್ ಹಾಸ್ಟೇಲ್ ಹಿಂಭಾಗದಿಂದ ದೊನಾಪೂಲ್ ಬೀಚವರಗೆ 5K.Mವರಗೆ ಬೀಚ ಚಾರಣ.ಸಮುದ್ರ ದಂಟೆಗುಂಟ ಮರಳಿನಲ್ಲಿ ಬರೆಗಾಲನಲ್ಲಿ ನಡೆಯುದು ಅಪರೂಪದ ಅನುಭವ.
ತುಂಬಾ ಜನ,ತುಂಡು ಲಂಗದ ಲಲನೆಯರು,ಕೆಂಪು ಚಾಕೆಟ್ ತೊಟ್ಟ ಲೈಪ್ ಗಾರ್ಡಗಳು,ಭಯಂಕರ ಜನಂಗುಳಿ,ಅಲ್ಲೊ ಇಲ್ಲೊ ಹೋಗುತ್ತಿರುವ ಚಿಕ್ಕ ದೋನಿಗಳು,ನೀರಿನ ಬಾಟಲಗಾಗಿ ಮುಗಿಬಿದ್ದ ಡೊಳ್ಳು ಹೊಟ್ಟೆಯ ಅಂಕಲಗಳು,ಫೊಟೊ ತಗಿಸಿಕೋಳ್ಳುತ್ತಿರುವ ನವ ವಿವಾಹಿತರು,ಎಲ್ಲೆ ಹೋದರು ಶಾಪ್ಪಿಂಗ್ ಮಾಡೊ ಹೆಂಗಸರು,ಇವೆಲ್ಲಾ ಕಂಡು ಬಂದದ್ದು ದೊನಾಪೊಲಾ ಬೀಚನಲ್ಲಿ. ನಾವು ಒಂದು ಘಂಟೆ ತಿರುಗಾಡಿ ನಂತರ ಬಸ್ಸಿನಲ್ಲಿ ಮರಳಿ ಬೆಸ್-ಕ್ಯಾಂಪಗೆ.
ಮದ್ಯಾಹ್ನ ಚಾರಣದ ಬಗ್ಗೆ ಮಾಹಿತಿ ಮನೊಜ ಜೋಶಿಯವರಿಂದ.ಜೋಶಿಯವರು,ಗೋವಾದ ಸಂಸ್ಕ್ರಿತಿಯ ಬಗ್ಗೆ,ಚಾರಣದ ದಾರಿಯ ಬಗ್ಗೆ,ಚಾರಣದ ಮುಂಜಾಗ್ರತೆಗಳ ಬಗ್ಗೆ,ಮಹಾವೀರ ಜೈನ್ ರಾಷ್ಟ್ರೀಯ ಅಭಯಾರಣ್ಯದ ಬಗ್ಗೆ,ಕಾಡಿನಲ್ಲಿರುವ ಮರ ಗಿಡಗಳ ಬಗ್ಗೆ ,ಮತ್ತು ಚಾರಣಕ್ಕೆ ಮಾರ್ಗದರ್ಶಕವಿರುವದಿಲ್ಲ ಎನ್ನುದರ ಬಗ್ಗೆ ವಿವರವಾಗಿ ವಿವರಿಸಿದರು.
ಮೂರನೇ ದಿನ,ನಮ್ಮ ಅಧಿಕ್ರತ ಚಾರಣ ಶುರುವಾಯಿತು ಎನ್ನಬಹುದು.ಬೆಸ್-ಕ್ಯಾಂಪನಿಂದ ಬಾಗಮೊಲ್ ಬೀಚಗೆ ಬಸ್ಸಿನಲ್ಲಿ 1 ಘಂಟೆ ಪ್ರಯಾಣ ಮತ್ತು ಅಲ್ಲಿ 1 ಘಂಟೆವರಗೆ ಆಟೋಟಗಳು.ಬೀಚನ ಪಕ್ಕದಲ್ಲಿರುವ ದೊಡ್ಡದಾದ ಕಲ್ಲುಗಳನ್ನು ದಾಟಿ,ಹಾಗೆ ಸಮುದ್ರದಂಡೆಯಲ್ಲಿ ನಡೆಯುತ್ತಾ ವೆಲಸೋವಾ ಬೀಚ ತಲಪುವದು ನಮ್ಮ ಗುರಿ.ನಮ್ಮ ಏಡಗಡೆ ತೆಂಗಿನ ಮರಗಳ ಸಾಲು,ನಮ್ಮ ಮುಂದೆ ಅಕ್ಷಯವಾಗಿ ಬಿದ್ದಿರುವ ಮರಳು,ಬಲಗಡೆ ಕಣ್ಣೂ ಹಾಯಿಸದಷ್ಟು ದೂರ ಕಾಣುವ ಸಾಗರ ,ಸಾಗರ ತೆರೆಗಳ ನರ್ತನ, ಮೇಲೆ ಸುರಿಯುತ್ತಿರುವ ಬಿಸಿಲು,ಎಷ್ಟು ದೂರ ನೋಡಿದರೂ ಯಾವ ಮನುಷ್ಯ ಕಾಣದೇ ಇರುವುದು, ಈ ಚಾರಣ ಹಾದಿಯ್ ವೈಶಿಷ್ಟವಾಗಿತ್ತು.ಗೋವಾದಲ್ಲಿ ಈ ಥರಾ ನಿಬಿಡ ,ನಿರ್ಜನ ಬೀಚವಿರುವುದು ತುಂಬ ಆಶ್ಚರ್ಯವೇನಿಸಿತು ಈ ದಾರಿಯಲ್ಲಿ ಚಾರಣ ಏರ್ಪಡಿಸಿದ್ದಕ್ಕೆ ಯೂತ್-ಹಾಸ್ಟಲಗೆ ಮತ್ತೋಮ್ಮೆ ಹೆಮ್ಮೆ ಎನಿಸಿತು.

Tuesday, January 11, 2011

ನಿಸರ್ಗದ ಮಡಿಲಲ್ಲಿ - ಭಾಗ 3

ದಿನ 4 ಕಾಲೂರನಿಂದ ವನಚಲುವರಗೆ,ಅಜ್ಜಿ ಮೊಟ್ಟೆ ಬೆಟ್ಟದ ಮೂಲಕ.


ಚಾರಣ ಶುರುವಾದದ್ದು ಬೆಳಿಗ್ಗೆ ೯.೦೦.ಈವತ್ತು ನಮ್ಮ ಮೊದಲಿನ ಗೈಡಾದ ರಮೇಶನಿಗೆ ವಿದಾಯ ಹೇಳಿ ,ಹೊಸ ಗೈಡಾದ ಎ.ನಾರಯಣಪ್ಪನ ಜೊತೆ,ಬೆಟ್ಟವನ್ನು ನಿಧಾನವಾಗಿ ಮುನ್ನೆಡೆದವು.ನಡುವೆ ಬರುವ ಅಜ್ಜಿ ಮೊಟ್ಟೆವನ್ನು ಹತ್ತಿ,ಅತ್ಯಂತ ದೂರದಲ್ಲಿ ಕಾಣುವ ಕುಮಾರ ಪರ್ವತವನ್ನು,ಅದರ ಸುತ್ತಲಿನ ಅನೇಕ ಪರ್ವತಗಳನ್ನು,ವಿಶಾಲವಾಗಿ ಕಣಿವೆಗಳಲ್ಲಿ ಹರಡಿರುವ ದಟ್ಟ ಕಾಡನ್ನು ನೋಡಿ ಮುಂದೆ ಸಾಗಿದೆವು.ದಾರಿಯಲ್ಲಿ ಬರುವ 3-4 ಹಳ್ಳ ಹೊಳೆಗಳನ್ನು ದಾಟುವಾಗ ಅಸಂಖ್ಯಾತ ಜಿಗಣೆಗಳ ಕಾಟದಿಂದ ತಪ್ಪಿಸಿಕೊಂಡು ಬೆಟ್ಟದ ಮೇಲೆ ಊಟಕ್ಕೆ ನಿಂತಾಗ ಸಮಯ 1.೦೦.
ಊಟದ ನಂತರ ಸ್ವಲ್ಪ ವಿಶ್ರಮಿಸಿ,ಹಾಗೆ ಮುಂದೆ ನಡೆದಾಗ ,ಒಂದು ಬೆಟ್ಟದ ಮೇಲೆ ದೂರದಲ್ಲಿ 3-4 ಕಾಟಿಗಳನ್ನ್ದ್(ಕಾಡೆಮ್ಮೆ)ಕಂಡವು. ಮುಂದೆ 7 ಕಿ,ಮೀ ನಡೆದು ವನಚಲು ಕ್ಯಾಂಪ್ ತಲುಪಿದಾಗ ಸಮಯ ಸಂಜೆ5.30.ಈಲ್ಲಿ ಅರ್ಧ ಶಾಲೆಯಲ್ಲಿ,ಅರ್ಧ ಟೆಂಟಗಳಲ್ಲಿ ಕ್ಯಾಂಪಗಳಿದ್ದುವು.

ದಿನ 5 ವನಚಲು ಕ್ಯಾಂಪನಿಂದ ಮಡಿಕೇರಿ ಬೆಸ್-ಕ್ಯಾಂಪವರಗೆ ,ನಿಶಾನೆಬೆಟ್ಟದ ಮೂಲಕ

ಈವತ್ತು ಕೊನೆಯ ದಿನದ ಚಾರಣ. ದಿನ ಆಲಸಿಯಾಗಿ ಶುರುವಾಗಿ ಸುಮಾರು 9.15ಕೊನೆಯ ಚಾರಣ ಆರಂಭವಾಯಿತು.ಮೊದಲುನಿಶಾನೆ ಬೆಟ್ಟವನ್ನು ನೋಡಿ,ಅಲ್ಲಿಂದ ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಹೆದ್ದಾರಿಯನ್ನು , ಸಂಪಾಜೆ ಗ್ರಾಮವನ್ನು ,ಅದರ ಹಿಂದುಗಡೆ ಹಬ್ಬಿರುವ ಕಾಡನ್ನು ವಿಕ್ಷಿಸಿದೆವು.ಮೊದಲಿನ ಕಾಲದಲ್ಲಿ ನಿಶಾನೆ/ಗುರಿಯನ್ನು ನೋಡಲು ಈ ಬೆಟ್ಟವನ್ನು ಬಳಸುತ್ತಿದ್ದರಿಂದ ಈ ಬೆಟ್ಟಕ್ಕೆ ನಿಶಾನೆಬೆಟ್ಟವೆಂದು ಹೆಸರು. ಇಲ್ಲಿಂದ ಕೆಳಗೆ ಇಳಿಯುತ್ತ ಮಡಿಕೇರಿ ಪಟ್ಟಣದ ರಾಜಾ ಸೀಟ್ ತಲುಪಿದಾಗ ಸಮಯ 3.3೦ ಮತ್ತು ಕ್ರಮಿಸಿದ್ದು 15-16 ಕಿ.ಮೀ.


ಚಾರಣ ತಂಡ 6


ತಂಡ 5ರಲ್ಲಿ 18 ಜನ ಮತ್ತು ತಂಡ 6ರಲ್ಲಿ 13ಜನರನ್ನು ಒಳಗೊಂಡ ಈ ತಂಡದಲ್ಲಿ ದೇಶದ ಎಲ್ಲಾ ಭಾಗಗಳಿಂದ ಎಲ್ಲಾ ವಯೋಮಾನದವರಿದ್ದರು.13ವಯಸ್ಸಿನ ಬೆಂಗಳೂರಿನ ಚಿದು, ಪಿ.ಯು.ಸಿ ಒಡುತ್ತಿರುವ ಅವರಣ್ಣ ಗಗನ,8ಗುಜರಾತಿ ಬೆಹನಗಳು,3-4 ಗುಜ್ಜುಗಳು,ಡೆಲ್ಲಿಯಿಂದ 66 ವರ್ಷದ ಪ್ರಕಾಶ,58 ವರ್ಷದ ಪುರಿ,ನಮ್ಮ ತಂಡದ ನಾಯಕ, ಮಹಾರಾಷ್ಟ್ರದ 5-6 ಯುವಕರು,ಆಂಧ್ರಪ್ರದೇಶದ ಮೂರು ಜನ ಮತ್ತು ಕರ್ನಾಟಕದ 8 ಜನ ರೋಹಿತ್(Fidleity),ಗಗನ,ಚಿದು,ಸಿದ್ದು(mindtech),ಅಜಯ(NDTV)ಮತ್ತು ವಿಜಯ(HP)ರಿದ್ದರು.ಈ ಗ್ರುಪನಲ್ಲಿರುವ ರಾಮದಾಸ ರಾವಂಡೆ ಕತೆ ಕೂತಹಲವಾಗಿದೆ. ವಯಸ್ಸು 63, ಮಹಾರಾಷ್ಟ್ರದ ಜಲಗಾಂವದವರು. ಈಗ ವಿಶ್ರಾಂತ ಜೀವನ.ಈವರಿಗೆ 1998ರಲ್ಲಿ ಪಾರ್ಶ್ವವಾಯುವಾಗಿ,ಕೇವಲ ನೋಟ ಮತ್ತು ಸ್ಪರ್ಶ ಗ್ರಹಿಸಬಲ್ಲವರಾಗಿದ್ದರು.ಬೆಂಗಳೂರಿನ ನಿಮ್ಹಾನ್ಸನಲ್ಲಿ 6ತಿಂಗಳು ಕಾಲ ಚಿಕಿತ್ಸೆಗೆ ಭರ್ತಿಯಾಗಿ ಪಿಜಿಯೊಥೆರಪಿ(Physiotheropy) ಮೂಲಕ ಮೊದಲಿನ ಹಾಗೆ ಒಡಾಡಬಲ್ಲವರಾದರು. ಅವರು ಕೂಡ ಈ ಚಾರಣವನ್ನು ಯಶಸ್ವಿಯಾಗಿ ಮುಗಿಸಿದ್ದನ್ನು ನೋಡಿದರೆ ,ಮನುಷ್ಯ ಮನಸ್ಸು ಮಾಡಿದರೇ,ಎನೆಲ್ಲಾ ಸಾಧಿಸಬಹುದು ಎಂದುದಕ್ಕೆ ಒಳ್ಳೆ ಊದಾಹರಣೆ.


ಈತ ರಮೇಶ H ಮಂದ್ರಾರ.62ವಯಸ್ಸಿನ ಈತ ಕರ್ವಾಲೊ ಕಾದಂಬರಿಯಲ್ಲಿ ಬರುವ ಮಂದಣ್ಣನ ಶಿಷ್ಯನೋ,ಇಲ್ಲಾ ಅವನ ಅಪರಾವತಾರೋ ದೇವರೇ ಬಲ್ಲ. ಈತ ಮೊದಲು 3ದಿನಕ್ಕೆ ಮಾರ್ಗದರ್ಶಕ.ಕನ್ನಡ,ಕೂರ್ಗಿ ಮತ್ತು ತುಳು ಭಾಷೆ ಬಲ್ಲವನಾಗಿದ್ದು ಯಾವಗಲೂ ಕಿವಿಯಿಂದ ಕಿವಿಯವರಗೆ ಹಲ್ಲು ಕಿರಿದುಕೊಂದಿರವನು.ಕಾಡಿನಲ್ಲಿ ಸಕ್ಕರೆ ರೋಗಕ್ಕೆ ಯಾವ ಬಳ್ಳಿ ಕಷಾಯ ಒಳ್ಳೆಯದು,ಯಾವ ಹಣ್ಣು,ಯಾವಾಗ ಬಿಡುವುದು,ಕಾಡಿನಲ್ಲಿರುವ ತರಾವರಿ ಬಳ್ಳಿಗಳು,ಅವುಗಳ ಉಪಯೋಗ,ಪ್ರಸವವಾದ ಹೆಂಗಸರಿಗೆ ಯಾವ ಗಿಡಮೂಲಿಕೆ ಔಷಧಿ ಒಳ್ಳೆಯದು, ಕಾಡು ಅನಾನಸ್ಸುಹಣ್ಣು,ಕಾಡು ಯಾಲಕ್ಕಿ,ಯಾಲಕ್ಕಿ ಬಗೆಗಳು,ರೊಬಸ್ಟಾ ಮತ್ತುಅರೇಬಿಕಾ ಕಾಫಿ ತಳಿಗಳಿಗಿರುವ ವ್ಯತ್ಯಾಸ,ಜೇನು ಸಾಕಣೆ ಪೆಟ್ಟಿಗೆಗಳು,ಹುಲಿ ಜೇನು(ಹೆಜ್ಜೇನು),ಅವುಗಳು ದಾಳಿ ಮಾಡಿದರೆ ತಪ್ಪಿಸಿಕೊಳ್ಳಲಾಗುವದಿಲ್ಲ,ಮುಜಂಟೆ ಜೇನುಗಳು,ಅವುಗಳು ಕೇವಲ ತೆಂಗಿನಮರದ ಹೂವಿನ ಮಕರಂದದಿಂದ ಜೇನು ಮಾಡುವುದು,ಯಾಲಕ್ಕಿ ಬಳ್ಳಿಗಳು,ಮೆಣಸು ಬಳ್ಳಿಗಳು,ಮೆಣಸ್ಸಿಗೆ ಹೂಗಳೀರುವದಿಲ್ಲಾ,ಅವುಗಳಲ್ಲಿ ಬೆಳಿಗ್ಗೆ ಬೀಳುವ ಮಂಜಿನ ಹನಿಯಿಂದ ಪರಾಗಸ್ಪರ್ಶವಾಗಿ,ಮೆಣಸ್ಸಾವುಗುವುದು,ಅದು ನಾವು ನೀವು ಮಾಡುವ ಪರಾಗಸ್ಪರ್ಶದ ತರಾ ಅಲ್ಲಾ ಅನ್ನೊ ಒಗ್ಗರಣೆ ಬೇರೆ,ರಾತ್ರಿ ಶೆಂದಿಗೆ ವ್ಯವಸ್ಠೆ ಮಾಡಬೇಕಾ? "ನಮ್ಮೂರು ಚಂದವೊ,ನಿಮ್ಮೂರು ಚಂದವೊ"ಅನ್ನುವ ಕೆ.ಎಸ್.ಎನ್. ಕವಿತೆ ಹಾಡುತ್ತ ಎಲ್ಲರನ್ನು ನಗಿಸುತ್ತಾ ಮುಂದೆ ಕರೆದೊಯ್ಯುತ್ತಿದ್ದ.
ಮಂಡೆಮುಕ್ರ ಹೇಗೆ ಕೂಗುತ್ತದೆ,ಭೀಮರಾಜ ಪಕ್ಷಿ ಹೇಗೆ ಬೇರೆ ಬೇರೆ ಪಕ್ಷಿಗಳ ,ಮನುಷ್ಯರ ಸಿಳ್ಳೆಯನ್ನು ಅನುಕರಿಸುತ್ತದೆ ಅನ್ನೊದನ್ನ ಕೇಳಿಸಿದ್ದು ರಮೇಶನೇ."ನಾಯಿ ಇದ್ದವನಿಗೆ ಬೇಟೆ,ಬಾಯಿ ಇದ್ದವನಿಗೆ ಬೊಟ್ಟು,"ಕೊಡಗಿನ ಗಾದೆಗಳನ್ನು ಹೇಳುತ್ತ ಚಾರಣ ಹಾದಿ ಸುಲಭಗೊಳಿಸುತ್ತಿದ್ದ.ಎಲಕ್ಕಿ 3ವರ್ಷಗಳ ಹಿಂದೆ ತುಂಬಾ ಬೆಳೆದ್ದಿದ್ದರು,ಆಗ ಬೆಲೆ ಇರಲಿಲ್ಲ,ಈಗ ಸಿಕ್ಕಾಪಟ್ಟೆ ಬೆಲೆ, ಅದಕ್ಕೆ ಕಡಿಮೆ ಬೆಲೆಗೆ ಸಿಗ್ತಾ ಇಲ್ಲಾ,ಮರ ಅಣಬೆ,ತೋಟದಲ್ಲಿ ಕೆಲಸಗಾರರ ಸಮಸ್ಯೆ,ಇಲ್ಲಿರುವರೆಲ್ಲಾ ಬೆಂಗಳೂರು ಇಲ್ಲಾ ಮೈಸೂರು ಸೇರಿ ಹೋಟಲ್ಲೊ,ಬಾರನಲ್ಲಿ ಸ್ಯೆಕುರಿಟಿಗಾರ್ಡಗಳಾಗಿ ಸೇರಿ,ಒಂದು ಕೈಯಲ್ಲಿ ಗನ್ನು,ಇನ್ನೊಂದು ಕೈಯಲ್ಲಿ ******* ಹಿಡದುಕೊಂಡು ಕೆಲಸ ಮಾಡ್ತಾ ಇದಾರೆ ಅನ್ನೊ ವಿಷಯಗಳು ತಿಳಿದುಬಂದುದ್ದು ಈತನಿಂದ.
ಮೊದಲಿನೇ ಬಾರಿ 31ಜನಕ್ಕೆ ಮಾರ್ಗದರ್ಶಕನಾಗಿ ಮತ್ತು ಗುಂಪಿನಲ್ಲಿರುವ ಅರ್ಧ ಜನಕ್ಕೆ ಕನ್ನಡ ಬರುತ್ತಿರವಾದರಿಂದ ಗೊಪಿನಲ್ಲಿರುವ ಜನಕ್ಕೂ ಈತನಿಗೂ ಜಗಳ,ವಾದ-ವಿವಾದ ,Idiotಅನ್ನೊ ಬೈಗುಳಗಳು,ಅದರೂ ಅದೆನ್ನೆಲ್ಲಾ ಲೆಕ್ಕಕ್ಕೆ ತಗೆದುಕೊಳ್ಳದೇ,ಯಾವಗಲೂ ನಗುತ್ತ ಮುಂದೆ ಬನ್ನಿ,ಕಮ್ ಪಾಸ್ಟ್(come fast)ಅನ್ನುತ್ತ ,ಹಲ್ಲಿ ಚಿಲುಯುತ್ತಾ ಮಜಾ ಮಾಡುತ್ತ ನಮಗೆ ಜೊತೆ ನೀಡಿದ.
ಕೊನೆಯದಾಗಿದುಡ್ಡು ಕೊಟ್ಟು ಗುಡ್ಡ ಸುತ್ತೊಕೊ ಯಾಕೆ ಹೋಗತಿಯಾ? ಏನು ಸಿಗುತ್ತೆ ಅನ್ನೋವರಿಗೆ ಹೇಗೆ ಊತ್ತರಿಸುವುದು ತಿಳಿಯದು.5-6 ದಿನ ನಿಸರ್ಗದ ಮಡಲಲ್ಲಿ,ಎಲ್ಲಾ ಮರೆತು,ಚಾರಣ ಮಾಡುವದು ಒಂದು ವಿಶಿಷ್ಟ ಅನುಭವ. ಬೆಳಿಗ್ಗೆ ಎದ್ದು,ಸುಮ್ಮನೆ ಕಾಡು ಸುತ್ತಿ,ಹಣ್ಣಾಗಿ ಹಸಿದು ಕ್ಯಾಂಪಗೆ ಬಂದು ಬೀಳುವುದು ಒಂದು ಮರೆಯಲಾರದ ಅನುಭವ. ಕಡೇಪಕ್ಷ ನಮಗೆ ನೋಡಲು ಕಾಡು, ಕೊಂಚ ಪ್ರಾಣಿಗಳು,ಪಕ್ಷಿಗಳಿರುವುದು ನಮ್ಮ ಸುದೈವ,ಮುಂದಿನ ಪೀಳಿಗೆಗೆ ಇವೆಲ್ಲಾ ಇರುವದಿಲ್ಲ ಅನ್ನೊದು ದುರ್ದೈವ :(-.

ಯುತ್ ಹಾಸ್ಟೆಲ್ ಅಸ್ಸೊಸಿಯನ್ ಅಪ್ ಇಂಡಿಯಾ (Youth Hostel Assocation of India)

ವರ್ಷದ ಕೊನೆಯಲ್ಲಿ ಮತ್ತು ಎಪ್ರಿಲ್ ಮತ್ತು ಮೇನಲ್ಲಿ ದೇಶದ ವಿವಿಧ ಭಾಗಗಗಲ್ಲಿ YHAI ಚಾರಣ ಎರ್ಪಡಿಸುತ್ತಾರೆ.ಆಸಕ್ತರು http://www.yhaindia.org/ ಲಿಂಕನಲ್ಲಿ ಹೆಚ್ಚಿನ ಮಾಹಿತಿ ನೋಡಬಹುದು.
YHAI ಕರ್ನಾಟಕದವರು ಕೊಡಗನಲ್ಲಿ ಕಳಿದ 8ವರ್ಷಗಳಿಂದ ಚಾರಣ ಎರ್ಪಡಿಸುತ್ತಾರೆ.6-7 ಚಾರಣಕ್ಕೆ ಪೂರ್ತಿ ತಂಡ ಅಪಾರ ಶ್ರಮ, ತಾಳ್ಮೆ,ಅರ್ಪಣಾ ಮನೊಭಾವ,ಚಾರಣದ ದಾರಿಗಳನ್ನು ನಿರ್ಧರಿಸುತ್ತಾರೆ. ಈ ಪೂರ್ತಿ ಚಾರಣವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಧಾರವಾಡದ YHAI ಡಾಕ್ಟರ್ ಸತೀಶ ಕನ್ನಯ್ಯ,ಬೆಂಗಳೂರಿನ ಶ್ರೀರಂಗಯ್ಯ, ಕ್ಯಾಂಪ ಲೀಡರಗಳಾದ ಅನ್ನಪೂರ್ಣಮ್ಮ, ಅಂಬಿಕಾ, ಅಭಿಷೇಕ,ಹಿರೇಮಠ, ಕೊಡಗು ಯುತ್ ಹಾಸ್ಟೆಲ ಸಿಬ್ಬಂದಿಗಳು ಮತ್ತು ರುಚಿಕಟ್ಟಾಗಿ ಅಡುಗೆ ಬಡಸಿದ ಅಡುಗೆಯವರಿಗೆ ನಮ್ಮೆಲ್ಲರ ಅನಂತ ನಮನಗಳು.

ಮುಗಿಯಿತು.....

Monday, January 03, 2011

ನಿಸರ್ಗದ ಮಡಿಲಲ್ಲಿ - ಕೊಡಗು ಚಾರಣ-ಭಾಗ 2

ದಿನ 2- 26/12/2010 ತಂತಿಪಾಲನಿಂದ ಮುಕ್ಲೊಡು, ಕೊಟೆ ಬೆಟ್ಟದ ಮೂಲಕ
ನಿಸ್ಸಂಶಯವಾಗಿ ಈ ಚಾರಣದ ಕಠಿಣ ಹಾದಿ. ಮೊದಲು 25 ಡಿಗ್ರಿನಲ್ಲಿ ಟಾರ್ ರೋಡ, ನಂತರ ಕಚ್ಚಾ ಜೀಪ ರೋಡ (೪ Wheel Drive) ,ಅಮೇಲೆ 40 ಡಿಗ್ರಿನಲ್ಲಿ ದನಕರುಗಳು ಹೋಗುವ ಹಾದಿಯಲ್ಲಿ ಚಾರಣ.ಗುಂಪಿನಲ್ಲಿರುವ ಅರ್ಧ ಜನಕ್ಕೆ ಆಗಲೇ ಸುಸ್ತು. ಕಠಿಣವಾದ ಹಾದಿ ,ಮಣಭಾರದ ನಮ್ಮ ಬ್ಯಾಗಗಳು,ಖಾಲಿಯಾದ ನೀರಿನ ಬಾಟಲಗಳು, ಅಲ್ಲಿ ಗುಡ್ಡ ಬೆಟ್ಟದಲ್ಲಿ ಹರಿವು ನೀರು ಯಾವ ಮಿನರಲ್ ವಾಟರಗಿಂತ ಕಡಿಮೆಯಿಲ್ಲ, ಕುಡಿಯಿರಿ ಅಂತ ಹೇಳಿದರು ಕೇಳದ ಮೂರ್ಖ ಜನಗಳ ಜೊತೆ 6 ಕಿ.ಮೀ ಕ್ರಮಿಸಿದಾಗ ಕಂಡಿತು ಕೊಟೆ ಬೆಟ್ಟ. ಕೊಡಗಿನ ಎರಡನೇ ದೊಡ್ಡಬೆಟ್ಟ (ಮೊದಲನೆಯದು ತಡಿಯನಮೊಳ್).ನಂತರ ತುಂಬಾ ಕಡಿಡಾದ ದಾರಿ.5ನಿಮಿಷಕ್ಕೆ ವಿರಾಮ ತಗೆದುಕೊಳ್ಳತ್ತಾ 65 ಡಿಗ್ರಿನಲ್ಲಿ ಕೊನೆಯ ದಾರಿ ಕ್ರಮಿಸಿ, ಉಸ್ಸಪ್ಪ ಎಂದು ಬೆಟ್ಟದ ಮೇಲೆ ತಲುಪಿದಾಗ ಮದ್ಯಾಹ್ನ 1ಘಂಟೆ. ಬೆಟ್ಟದ ಮೇಲಿಂದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ, ಕಣ್ಣು ಹಾಯಿಸದಷ್ಟು ದೂರ ಕಾಣುವ ಪರ್ವತಗಿರಿಗಳು,ಕಣಿವೆಗಳಲ್ಲಿ ಹರಡಿರುವ ದಟ್ಟಕಾಡುಗಳು,ಬೆಟ್ಟದ ಮೇಲೊಂದು ಪುಟ್-ಬಾಲ್ ಮೈದಾನದಷ್ಟು ವಿಸ್ತಾರವಾದ ಜಾಗ, ಅಲ್ಲೊಂದು ಪುಟ್ಟದಾದ ಶಿವನ ದೇವಾಲಯ,ಅದರ ಹಿಂದುಗಡೆ ಎರಡು ಚಿಕ್ಕದಾದ ಹೊಂಡಗಳು,ಮೇಲ್ಗಡೆಯಿಂದ ಪ್ರಖರವಾಗಿ ಹೊಡೆಯುತ್ತಿದ್ದ ಬಿಸಿಲು. ಇಲ್ಲಿ ಊಟಕ್ಕೆ 45 ವಿಶ್ರಾಂತಿ
ನಂತರ ಬೆಟ್ಟದ ಇನ್ನೊಂದು ಕಡೆಯಿಂದ ಇಳಿತ. ತುಂಬಾ ಕಷ್ಟಕರವಾದ ಹಾದಿ. ಸುಮಾರು 80 ಡಿಗ್ರಿನಲ್ಲಿ ಇರುವ ಬೆಟ್ಟವನ್ನು 25ಮೀಟರನಷ್ಟು ಅಳದ ಬೆಟ್ಟವನ್ನು ಇಳಿಯಲು ಒಬ್ಬ ವ್ಯಕ್ತಿಗೆ ಹಗ್ಗದ ಸಹಾಯದಿಂದ ಇಳಿಯಲು 25- 30 ನಿಮಿಷವಾದರೂ ಬೇಕು.ಅಲ್ಲಿಂದ ಕೆಳಗೆ ಇಳಿದು ,ಮೂರು -ನಾಲ್ಕು ಬೆಟ್ಟಗಳನ್ನು ಸುತ್ತು- ಬಳಸಿ 9-10 ಕಿ.ಮೀ. ಚಾರಣ ಮಾಡಿ ಹೊಳೆ ಪಕ್ಕ ಇರುವ ಮುಕ್ಲೊಡು ಕ್ಯಾಂಪ್ ತಲುಪಿದಾಗ ತಂಡದಲ್ಲಿರುವ ಅರ್ಧಕ್ಕಿಂತ ಜಾಸ್ತಿ ಜನ ಅರ್ಧಸತ್ತವರಾಗಿದ್ದರು. ಅಲ್ಲಿರುವ ಹೊಳೆಯಲ್ಲಿ ಜಳಕ ಮಾಡಿ ಊಟ ಮಾಡಿ ರಾತ್ರಿ 10ಘಂಟೆಗೆ ಎಲ್ಲರೂ ಗಾಡನಿದ್ದೆಯಲ್ಲಿ.

ದಿನ 3 -27/12/2010 ಮುಕ್ಲೊಡುವಿನಿಂದ ಕಾಲೂರು , ಮಂದಲಪಟ್ಟಿಯ ಮೂಲಕ -

ಬೆಳಿಗ್ಗೆ 8.30 ಚಾರಣ ಶುರು. ಮೊದಲು 45 ನಿಮಿಷದವರಗೆ ಕಾಡಿನ,ಬೆಟ್ಟದ ಕಡಿದಾದ ಹಾದಿ.ನಂತರ ಸಿಗುವುದು ಟಾರ್ ರಸ್ತೆ. .ಈ ರಸ್ತೆ ಮುಂದೆ ಪುಷ್ಪಗಿರಿ ನಾಷನಲ್ ಪಾರ್ಕಗೆ ತಲುಪುವುದು .ಈ ಪ್ರದೇಶದ ಪಶ್ಮಿಮ ಘಟ್ಟಗಳ ವಿಹಂಗಮ ನೋಟ.ಈ ಪ್ರದೇಶಕ್ಕೆ ಮಂದಲಪಟ್ಟಿ ಪ್ರದೇಶವೆನ್ನುವರು. ಈ ದಿನದ ಚಾರಣದಲ್ಲ ಹಳ್ಳ-ಕೊಳ್ಳಗಳನ್ನು ದಾಟುತ್ತ,ಒಮ್ಮೆ ಕಾಡಿನಲ್ಲಿ,ಒಮ್ಮೆ ಬೆಟ್ಟದ ಮೇಲೆ,ನಂತರ ಕಾಫಿ ತೋಟಗಳ ಮಜವನ್ನು ಸವಿಯುತ್ತಾ ಕಾಲೂರು ಕ್ಯಾಂಪ್ ತಲುಪಿದಾಗ ಸಮಯ 3.30. ಕಾಲೂರು ಕ್ಯಾಂಪ್ ಸಹಿತ ಹೊಳೆ ಪಕ್ಕದಲ್ಲಿದ್ದು, ದಾರಿಯುದ್ದಕ್ಕೂ ಅನೆಗಳ ಹೋದ ಹಾದಿ ಕಂಡು ಬಂದವು. ಈ ಗ್ರಾಮದಲ್ಲಿ ವರ್ಷವಿಡಿ ಆನೆ ಕಾಟ ಹಂದಿ ಕಾಟ ಸರ್ವೆಸಾಮಾನ್ಯ.ಅದಕ್ಕೆ ಇಲ್ಲಿ ಅಪರೂಪಕ್ಕೆ ಕಾಣುವ ಜನರು ,ಕೋವಿ ಹಿಡಿದುಕೊಂದು ತಿರುಗುವುದು ಸಾಮಾನ್ಯ.

.ನದಿ ಪಕ್ಕ ಇರುವ ಕ್ಯಾಂಪ್ ಸೈಟ್,ನದಿಯ ಜುಳು ಜುಳು ನಿನಾದ, ಅದರಲ್ಲಿ ಹರಿಯುತ್ತಿರುವ ಝಳ ಝಳ ನೀರು,ಹಕ್ಕಿಗಳ ಚಿಲಿಪಿಲಿ ,ಮೋಡದಿಂದ ಸುತ್ತುವರೆದ ಪರ್ವತಗಳು,ಒಂದು ಅದ್ಬುತ ದ್ರಶ್ಯವನ್ನು ಕಟ್ಟಿಕೊಡುತ್ತವೆ.ರಾತ್ರಿ ಕ್ಯಾಂಪ್-ಪೈರನಲ್ಲಿ ಚಳಿ ಕಾಯಿಸುವುದು ಒಳ್ಳೆಯ ಅನುಭವ.ಬೆಳೆಗ್ಗೆ ಎದ್ದಾಗ,ಚುಮು ಚುಮು ಚಳಿ,ಮರದ ಮೇಲಿನ ತುಂತುರು ಹನಿಗಳು,ಇಬ್ಬನಿಯಿಂದ ಆರ್ವತವಾದ ಪರ್ವತಗಳು,ನದಿಯ ನೀರಿನ ಮೇಲಿಂದ ಬರುತ್ತಿವ ಮಂಜಿನ ಹೊಗೆ,ಈ ಸಮಯದಲ್ಲಿ ಚಳಿಯಿಂದ ನಡುಗುತ್ತ ತಿರುಗುವ ಮಜವನ್ನು ವರ್ಣಿಸಲಸಾದ್ಯ.

ಮುಂದುವರೆವುದು...